ಅತ್ಯಂತ ಸೋಮಾರಿಗೆ ಸಿಗಲಿದೆ 11.2 ಲಕ್ಷ ಸಂಬಳ !
ಪ್ಯಾರಿಸ್, ಎ. 12 : ಬೆಳಗ್ಗೆ ಹಾಸಿಗೆ ಬಿಟ್ಟು ಮೇಲೇಳಲು ಹೆಚ್ಚಿನವರಿಗೆ ಆಲಸ್ಯ. ಇನ್ನೂ ಸ್ವಲ್ಪ ಹೊತ್ತು ಮಲಗುವಾಸೆ. ಇಂತಹವರು ಆಲಸಿಗಳೆಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ ಇದೀಗ ಅತಿಯಾದ ಆಲಸಿಗಳಿಗೂ ಸಂತಸ ನೀಡುವ ಸುದ್ದಿಯೊಂದಿದೆ. ಬಾಹ್ಯಾಕಾಶದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಫ್ರಾನ್ಸ್ ದೇಶದ ಒಂದು ಸಂಸ್ಥೆ ಅತಿಯಾದ ಆಲಸಿಗಳನ್ನು ಹುಡುಕುತ್ತಿದೆಯಂತೆ. ಹಾಸಿಗೆಯಲ್ಲಿ ದಿನಗಟ್ಟಲೆ ಮಲಗುವಂತಹ 20ರಿಂದ 45 ವಯಸ್ಸಿನ ವ್ಯಕ್ತಿಯೊಬ್ಬನ ಹುಡುಕಾಟದಲ್ಲಿ ಈ ಸಂಸ್ಥೆ ಇದೆಯಂತೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿ ಪುರುಷನಾಗಿರಬೇಕಂತೆ.
"20 ಮಿನಟ್" ವೆಬ್ ಸೈಟಿನಲ್ಲಿ ನಮೂದಿಸಲಾದಂತೆ ಫ್ರಾನ್ಸಿನ ಇನ್ ಸ್ಟಿಟ್ಯೂಟ್ ಫಾರ್ ಸ್ಪೇಸ್ ಮೆಡಿಸಿನ್ ಆ್ಯಂಡ್ ಫಿಸಿಯೋಲಜಿ ತನ್ನ ಸಂಶೋಧನೆಗಾಗಿ 60 ದಿನಗಳ ಕಾಲ ಹಾಸಿಗೆಯಲ್ಲಿಯೇ ಮಲಗಬಲ್ಲ ಅಭ್ಯರ್ಥಿಯನ್ನು ಹುಡುಕುತ್ತಿದೆ. ಈ ಸಂಶೋಧನೆ ಮೂರು ತಿಂಗಳ ಕಾಲ ನಡೆಯಲಿದ್ದು ಅಭ್ಯರ್ಥಿ ಸಿಗರೇಟ್ ಸೇದುವವನಾಗಿರಬಾರದು ಎಂಬುದು ಇನ್ನೊಂದು ಷರತ್ತಾಗಿದೆ. ಅಷ್ಟೇ ಅಲ್ಲದೆ ಆತ ಆರೋಗ್ಯವಂತನಾಗಿದ್ದು ಪ್ರತಿ ದಿನ ವ್ಯಾಯಾಮ ಮಾಡುವವನಾಗಿರಬೇಕು. ಆತನಿಗೆ ಯಾವುದೇ ಅಲರ್ಜಿ ಇರಬಾರದು ಹಾಗೂ ಆತನ ಬಾಡಿ ಮಾಸ್ ಇಂಡೆಕ್ಸ್ 20ರಿಂದ 27 ಇರಬೇಕು. ಈ ಕೆಲಸ ನಿರ್ವಹಿಸುವ ಅರ್ಹ ಅಭ್ಯರ್ಥಿಗೆ 11.2 ಲಕ್ಷ ರೂ. ವೇತನ ದೊರೆಯಲಿದೆಯಂತೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಮೈಕ್ರೋಗ್ರಾವಿಟಿ ಪ್ರಭಾವದ ಬಗ್ಗೆ ಅಧ್ಯಯನಕ್ಕಾಗಿ ಇಂತಹ ಒಂದು ವ್ಯಕ್ತಿಯ ಹುಡುಕಾಟದಲ್ಲಿದೆಯಂತೆ ಫ್ರಾನ್ಸಿನ ಈ ಸಂಸ್ಥೆ.