2,240 ಕೋ.ರೂ.ವಂಚನೆ ಪ್ರಕರಣ : ನಾಲ್ವರ ಬಂಧನ
ಹೊಸದಿಲ್ಲಿ, ಎ.12: ಬೇನಾಮಿ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 2,240 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೂರ್ಯ ವಿನಾಯಕ್ ಇಂಡಸ್ಟ್ರೀಸ್ ನ ನಾಲ್ವರು ನಿರ್ದೇಶಕರನ್ನು ಸಿಬಿಐ ಬಂಧಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಜಯ್ ಜೈನ್, ರಾಜೀವ್ ಜೈನ್, ರೋಹಿತ್ ಚೌಧರಿ ಮತ್ತು ಸಂಜೀವ್ ಅಗರ್‌ವಾಲ್ ಎಂಬವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಬ್ಯಾಂಕ್‌ನಿಂದಹಣ ಪಡೆಯುವ ಸಲುವಾಗಿ ಈ ನಾಲ್ವರು ಆರೋಪಿಗಳು ಸುಮಾರು 100ಕ್ಕೂ ಹೆಚ್ಚು ಬೇನಾಮಿ ಸಂಸ್ಥೆಗಳನ್ನು ಬಳಸಿಕೊಂಡಿದ್ದು, ಒಟ್ಟು 2,240 ಕೋಟಿ ರೂ. ಹಣವನ್ನು ಬ್ಯಾಂಕಿನಿಂದ ಪಡೆದಿದ್ದರು ಎಂದು ಬ್ಯಾಂಕ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಇವರು ವಿದೇಶದಲ್ಲಿ ಸ್ಥಾಪಿಸಿರುವ ಆರು ಸಂಸ್ಥೆಗಳಿಗೆ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪದಲ್ಲಿ 300 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದರು ಎಂದು ದೂರಲಾಗಿದೆ. ಈ ಸಂಸ್ಥೆಗಳು ಯಾವುದೇ ವ್ಯವಹಾರ ನಡೆಸುತ್ತಿಲ್ಲ ಎಂದು ಸಿಬಿಐ ತಿಳಿಸಿದೆ.