×
Ad

ದೇಹದಿಂದ ಆತ್ಮ ಬೇರ್ಪಡಿಸಲು ತಂದೆ-ತಾಯಿಯನ್ನೇ ಕೊಂದ

Update: 2017-04-12 23:47 IST

ತಿರುವನಂತಪುರ, ಎ.12: ದೇಹದಿಂದ ಆತ್ಮವನ್ನು ಬೇರ್ಪಡಿಸುವ ಪ್ರಯೋಗ ಮಾಡುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ‘ಆತ್ಮಸಂಶೋಧಕ’ ಇದೀಗ ಪೊಲೀಸ್ ಅತಿಥಿ.

ತಿರುವನಂತಪುರದ ನಾಥನ್‌ಕೋಡ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿಚಿತ್ರ ಉದ್ದೇಶದಿಂದ ಕುಟುಂಬವನ್ನು ಹತ್ಯೆ ಮಾಡಿದ 30 ವರ್ಷದ ಕ್ಯಾಡೆಲ್ ಜಾನ್ಸನ್ ರಾಜಾ ಅವರ ಬಾಯಿಬಿಡಿಸಲು ಈಗ ಪೊಲೀಸ್ ತಂಡ ಮಾನಸಿಕ ತಜ್ಞರೊಬ್ಬರನ್ನೂ ಸೇರಿಸಿಕೊಂಡಿದೆ.
ಬೈಪೋಲಾರ್ ಸಮಸ್ಯೆಯಿಂದ ಬಳಲುತ್ತಿರುವ ರಾಜಾಗೆ ತನ್ನ ಕುಟುಂಬವನ್ನು ಹತ್ಯೆ ಮಾಡಿದ್ದಕ್ಕೆ ಯಾವ ಪಶ್ಚಾತಾಪವೂ ಇಲ್ಲ. ತಂದೆ, ತಾಯಿ ಹಾಗೂ ತಂಗಿಯನ್ನೂ ಈತ ತನ್ನ ಪ್ರಯೋಗಪಶುವಾಗಿ ಮಾಡಿಕೊಂಡಿದ್ದಾರೆ. ತನ್ನ ಕೃತ್ಯವನ್ನು ಒಪ್ಪಿಕೊಳ್ಳಲು ಈತನಿಗೆ ಯಾವ ಹಿಂಜರಿಕೆಯೂ ಇಲ್ಲ. ಇಡೀ ಪ್ರಕರಣ ತನ್ನ ಪ್ರಯೋಗದ ಭಾಗ ಎಂದು ಆರೋಪಿ ಸಮರ್ಥಿಸಿಕೊಂಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ಶಿಕ್ಷಣ ಮುಗಿಸಿ ಹುಟ್ಟೂರಿಗೆ ವಾಪಸಾಗಿದ್ದ ರಾಜಾ ಆ ಬಳಿಕ ಭೌತಿಕ ಶರೀರದಿಂದ ಆತ್ಮವನ್ನು ಬೇರ್ಪಡಿಸುವ ವಿಚಿತ್ರ ಪ್ರಯೋಗಕ್ಕೆ ಮುಂದಾದ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ. ಪ್ರಯೋಗದ ಮೂಲಕ ತನ್ನ ಸಂಬಂಧಿಗಳಿಗೆ ಮೋಕ್ಷ ದೊರಕಿಸಿಕೊಟ್ಟಿದ್ದಾಗಿ ಹೇಳಿಕೊಂಡಿದ್ದಾನೆ. ಒಂದೇ ದಿನ ಹರಿತವಾದ ಆಯುಧಗಳಿಂದ ನಾಲ್ವರನ್ನೂ ಕೊಂದು, ಅವರ ದೇಹವನ್ನು ದಹಿಸಿದ್ದಾನೆ. ಮನೆಯಿಂದ ಕೆಟ್ಟ ಸುಟ್ಟವಾಸನೆ ಬರುತ್ತಿರುವ ಬಗ್ಗೆ ನೆರೆಯವರು ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಅರ್ಧ ಸುಟ್ಟ ದೇಹಗಳು ಸಿಕ್ಕಿವೆ. ನಿವೃತ್ತ ಹೃದ್ರೋಗ ತಜ್ಞೆ ಡಾ.ಜೀನ್ ಪದ್ಮಾ, ಪತಿ ರಾಜತಂಗಮ್, ಮಗಳು ಕರೋಲಿನ್ ಹಾಗೂ ಸಂಬಂಧಿ ಲಲಿತಾ ಹತ್ಯೆಗೀಡಾದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News