ಉಡುಪಿ: ಕಳಪೆ ಕಾಮಗಾರಿಗಾಗಿ 40 ಗುತ್ತಿಗೆದಾರರಿಗೆ ನೋಟಿಸ್

Update: 2017-04-12 18:31 GMT

ಉಡುಪಿ, ಎ.12: ಕಳಪೆ ಕಾಮಗಾರಿ, ಟೆಂಡರ್ ಕರೆದರೂ ಕೆಲಸ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು, ಇವುಗಳಿಗೆ ಕಾರಣರಾಗುವ ಇಂಜಿನಿಯರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮಣಿಪಾಲದಲ್ಲಿ ಇಂದು ನಡೆದ ಉಡುಪಿ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. 

ಜಿಲ್ಲೆಯ ಅನೇಕ ಕಿಂಡಿ ಅಣೆಕಟ್ಟು ಕಾಮಗಾರಿಗಳು ಕಳಪೆಯಾಗಿದ್ದು, ಅದರಲ್ಲಿ ನೀರು ನಿಲ್ಲುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕಾಂಗ್ರೆಸ್ ಸದಸ್ಯ ಜನಾರ್ದನ ತೋನ್ಸೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, 40 ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಪ್ರವೀಣ್ ಬಾರಕೂರು ಎಂಬವರ ಹೆಸರಿಗಾದ ಟೆಂಡರ್‌ನ್ನು ರದ್ದು ಪಡಿಸಿ ಮರು ಟೆಂಡರ್ ಕರೆಯಲಾಗಿದೆ ಎಂದರು.

ಕಳಪೆ ಕಾಮಗಾರಿಯಾಗಲು, ಕಾಮಗಾರಿ ಸಮರ್ಪಕವಾಗಿ ನಡೆಯದಿರಲು ಇಂಜಿನಿಯರ್‌ಗಳೂ ಜವಾಬ್ದಾರಿಯಾಗಿರುತ್ತಾರೆ. ಅವರನ್ನೂ ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. 2017-18ನೇ ಸಾಲಿನ ಕ್ರಿಯಾಯೋಜನೆಗಳನ್ನು ಇಲಾಖೆಗಳು ರೂಪಿಸುವಾಗ ಇಲಾಖಾಧಿಕಾರಿಗಳು ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಬೇಕು ಎಂದು ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಈ ಸಾಲಿನಲ್ಲಿ ಸ್ಪಿಲ್‌ ಓವರ್‌ಗೆ ಅವಕಾಶ ಇಲ್ಲ ಎಂದು ಸದಸ್ಯರು ಹೇಳಿದರು. ಈ ಸಂದರ್ಭ ಉತ್ತರಿಸಿದ ಮುಖ್ಯ ಯೋಜನಾಧಿಕಾರಿ ರಾವ್, ಈಗಾಗಲೇ ಜಿಪಂಗೆ ಬಜೆಟ್ ಅನುದಾನ ಬಿಡುಗಡೆಯಾಗಿದ್ದು, ರಸ್ತೆ ಕಾಮಗಾರಿಗಳಿಗೂ ಹೆಚ್ಚಿನ ಅನುದಾನ ಲಭ್ಯವಾಗಿದೆ ಎಂಬ ಮಾಹಿತಿ ನೀಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರುವ ಯೋಜನೆಯ ಅಂದಾಜು ವೆಚ್ಚದ ಮಾಹಿತಿಗಳನ್ನು ಆಯಾಯ ಗ್ರಾಪಂಗೆ ನೀಡಬೇಕೆಂದು ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಎಪಿಎಲ್‌ಗೂ ಸೀಮೆಎಣ್ಣೆ: ಪಡಿತರ ಚೀಟಿ ಸಮಸ್ಯೆಗಳ ಕುರಿತು ಚರ್ಚೆ ನಡೆದಾಗ, ಗ್ಯಾಸ್ ಇದ್ದರೆ ಸೀಮೆಎಣ್ಣೆ ಯಾಕೆ ನೀಡುವುದಿಲ್ಲ. ವಿದ್ಯುತ್ ಹೋದಾಗ ದೀಪ ಉರಿಸಲು ಸೀಮೆಎಣ್ಣೆ ಬೇಕು ಎಂದು ಸದಸ್ಯೆ ಗೌರಿ ದೇವಾಡಿಗ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಅಧಿಕಾರಿ, ಇದೀಗ ಗ್ರಾಮಾಂತರ ಪ್ರದೇಶದ ಎಪಿಎಲ್ ಕಾರ್ಡುದಾರರಿಗೂ 1 ಲೀ. ಸೀಮೆಎಣ್ಣೆ ವಿತರಿಸಲು ಹೊಸ ಆದೇಶ ಬಂದಿದೆ ಎಂದರು. ಆದೇಶದ ಪ್ರತಿ ಸಲ್ಲಿಸುವಂತೆ ಸಿಇಒ ಸೂಚಿಸಿದರು.

ಬಿಜೂರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಗೌರಿ ದೇವಾಡಿಗ ಗಮನ ಸೆಳೆದಾಗ ಉಪ್ಪು ನೀರಿನ ಸಮಸ್ಯೆಯಿಂದ ಸಿಹಿ ನೀರು ಪೂರೈಕೆ ತೊಂದರೆಯಾಗಿದ್ದು ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಟ್ಯಾಂಕರ್ ಅಥವಾ ನಳ್ಳಿಯ ಮೂಲಕ ಕುಡಿಯಲು ನೀರು ಪೂರೈಸುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಮಾಹಿತಿ ಬಗ್ಗೆಯೂ ಚರ್ಚೆ ನಡೆಯಿತು. ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ಲಕ್ಷ, ಅಕ್ಷರ ದಾಸೋಹದಡಿ ನೀಡುವ ಆಹಾರಗಳನ್ನು ಸರಕಾರದ ಸುತ್ತೋಲೆಯಂತೆ ಬಳಸಿಕೊಳ್ಳದಿರುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಬಾಬು ಶೆಟ್ಟಿ ಒತ್ತಾಯಿಸಿದರು. ಮೀನುಗಾರಿಕೆ ಮತ್ತು ಬಂದರು ಇಲಾಖೆಯಲ್ಲಿ ಟೆಂಡರ್ ಕರೆಯದೆ ಕಾಮಗಾರಿ ಕರೆಯಲು ಅವಕಾಶವಿದೆಯೇ ಎಂದು ಸದಸ್ಯ ಸುರೇಶ್ ಬಟ್ವಾಡೆ ಕೇಳಿದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಂಗನವಾಡಿ ವ್ಯವಸ್ಥೆ ಬಗ್ಗೆ, ಕುಡಿಯುವ ನೀರಿನ ಬಗ್ಗೆ, ಅಪಾಯಕಾರಿ ರಸ್ತೆಯ ಬಗ್ಗೆ ಸಭೆಯ ಗಮನಸೆಳೆದರು.

ಸದಸ್ಯೆ ಜ್ಯೋತಿ ಹರೀಶ್, ಕಾರ್ಕಳ ವ್ಯಾಪ್ತಿಯ ಹೆಬ್ರಿ, ಕಡ್ತಲ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸರಕಾರದ ಗಮನಸೆಳೆದಾಗ, ಕಾರ್ಕಳ ತಹಶೀಲ್ದಾರರು ಉತ್ತರಿಸಿ, ಸರಕಾರಿ ಜಾಗವನ್ನು ಅಳತೆ ಮಾಡಿಸಿ ಬೇಲಿ ಹಾಕಿದ್ದು ನಿವೇಶನ ನೀಡಲು ಜಾಗವನ್ನು ಗುರುತಿಸುವ ಉದ್ದೇಶವನ್ನು ಮಂಡಿಸಲಾಗಿದೆ ಎಂಬ ಮಾಹಿತಿ ನೀಡಿದರು. ಶಿಲ್ಪಾ ಸುವರ್ಣ ಮಾತನಾಡಿ, ಪಾದೂರು ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಸಂದರ್ಭದಲ್ಲಿ ನಡೆಸಿರುವ ಸ್ಪೋಟದಲ್ಲಿ ಸುಮಾರು 35 ಮನೆಗಳಿಗೆ ಹಾನಿಯಾಗಿದ್ದು, ಇವರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಸ್ಪೋಟದ ಮಣ್ಣು ಕಲ್ಲುಗಳನ್ನು ಗದ್ದೆಗಳಲ್ಲಿ ಹರಡಿದ್ದು, ಕೃಷಿ ಭೂಮಿಗೆ ತೊಂದರೆ ಆಗಿದೆ. ಇದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಿದರು. ಈ ಬಗ್ಗೆ ಸಂಬಂದಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಿಯಾಂಕ ತಿಳಿಸಿದರು.

ಸದಸ್ಯರಾದ ಜನಾರ್ದನ ತೋನ್ಸೆ, ಪ್ರತಾಪ್ ಹೆಗ್ಡೆ ಮಾರಾಳಿ, ಬಟ್ವಾಡಿ ಸುರೇಶ್, ಮೈರ್ಮಾಡಿ ಸುಧಾಕರ ಶೆಟ್ಟಿ, ಶಂಕರ ಪೂಜಾರಿ ಬೈಂದೂರು, ಶಿಲ್ಪಾ ಗಂಗಾಧರ ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಗೌರಿ ದೇವಾಡಿಗ, ರಾಘವೇಂದ್ರ ಕಾಂಚನ್, ಚಂದ್ರಕಾ ರಂಜನ್ ಕೇಳ್ಕರ್, ರೇಶ್ಮಾ ಉದಯ ಕುಮಾರ್ ಶೆಟ್ಟಿ ಇನ್ನ, ಸುಮಿತ್ ಶೆಟ್ಟಿ ಬೈಲೂರು ಸಹಿತ ಹಲವು ಸದಸ್ಯರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಸಚಿವರ ಮಾಹಿತಿ ಸೋರಿಕೆ: ಜಿಲ್ಲಾ ಉಸ್ತುವಾರಿ ಸಚಿವರು ಬ್ರಹ್ಮಾವರ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ನಿಲ್ಲಿಸಿ ಎಂದು ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯೂ ಸೋರಿಕೆಯಾಗಿ ಅಕ್ರಮ ಮರಳು ದಂಧೆಕೋರರಿಗೆ ಲಭಿಸಿತ್ತು. ಈ ಬಗ್ಗೆ ತನಿಖೆಯಾಗುತ್ತಿದೆ. ಇಲಾಖೆಯಲ್ಲಿನ ಲೋಪಗಳ ಬಗ್ಗೆ ಮಾತನಾಡುವಾಗ ಸದಸ್ಯ ಜನಾರ್ದನ ತೋನ್ಸೆ ಈ ವಿಷಯ ಪ್ರಸ್ತಾಪಿಸಿದರು. ಸಚಿವರು, ಸರಕಾರವನ್ನೇ ಎಲ್ಲದಕ್ಕೂ ದೂಷಿಸಬೇಡಿ. ಎಲ್ಲರೂ ಒಕ್ಕೊರಲಿನಿಂದ ಅಕ್ರಮ ತಡೆಗೆ ಯೋಜನೆ ರೂಪಿಸೋಣ ಎಂದು ಅವರು, ಅಕ್ರಮ ದಾಳಿಗೆ ತಂಡ ರಚಿಸುವಾಗ ದಕ್ಷ ಅಧಿಕಾರಿಗಳನ್ನೇ ನೇಮಿಸಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News