ಬೆಳಕುಗಳ ಮಾಲೆಯಲ್ಲಿ ಕಂಗೊಳಿಸುತ್ತಿರುವ ಭಾರತ
ವಾಷಿಂಗ್ಟನ್, ಎ.13: ರಾತ್ರಿಯ ಹೊತ್ತು ಭೂಮಿ, ಮುಖ್ಯವಾಗಿ ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣಿಸುತ್ತದೆಯೆಂದು ನೋಡುವ ಕುತೂಹಲವಿದೆಯೇ?, ಹಾಗಾದರೆ 2012ರ ನಂತರ ಪ್ರಥಮ ಬಾರಿಗೆ ನಾಸಾ ಭೂಮಿಯ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಸ್ಯಾಟಲೈಟ್ ಚಿತ್ರಗಳು ಮನಮೋಹಕವಾಗಿದ್ದು, ಭೂಮಿ ಸ್ವರ್ಗದಂತೆ ‘‘ರಾತ್ರಿಯ ಬೆಳಕುಗಳಲ್ಲಿ’’ ಕಂಗೊಳಿಸುತ್ತಿದೆ.
ಇಂತಹ ಚಿತ್ರಗಳನ್ನು ನಾಸಾ ಕೆಲವು ವರ್ಷಗಳ ಅಂತರದಲ್ಲಿ 25 ವರ್ಷಗಳಿಂದ ಬಿಡುಗಡೆಗೊಳಿಸುತ್ತಿದ್ದರೂ ಇನ್ನು ಮುಂದೆ ನಿಯಮಿತವಾಗಿ ಇಂತಹ ಚಿತ್ರಗಳನ್ನು ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದೆ. ಹವಾಮಾನ ವರದಿಗಳ ವಿಧಾನವನ್ನೇ ಬದಲಾಯಿಸಬಲ್ಲ, ಪ್ರಾಕೃತಿಕ ವಿಕೋಪಗಳುಂಟಾದಾಗ ನಡೆಸಲಾಗುವ ಪರಿಹಾರ ಕಾರ್ಯಾಚರಣೆ ಮತ್ತು ಯುದ್ಧದ ಪರಿಣಾಮಗಳನ್ನು ಅರಿಯಲು ಇಂತಹ ಚಿತ್ರಗಳು ಸಹಕಾರಿ ಎನ್ನಲಾಗಿದೆ.
ದೇಶವೊಂದು ಕೆಲವು ವರ್ಷಗಳ ಅಂತರದಲ್ಲಿ ಎಷ್ಟು ಬೆಳೆದಿದೆಯೆಂಬುದೂ ಇಂತಹ ಚಿತ್ರಗಳಿಂದ ಅರಿಯಬಹುದಾಗಿದ್ದು. ಇಲ್ಲಿ ನೀಡಲಾಗಿರುವ ಭಾರತದ ಎರಡು ಚಿತ್ರಗಳಲ್ಲಿನ ಬೆಳಕುಗಳ ಆಧಾರದಲ್ಲಿ ಬದಲಾವಣೆ ಗೋಚರಿಸುತ್ತಿದೆ. ಒಂದು ಚಿತ್ರ 2012ರಲ್ಲಿ ನಾಸಾ ತೆಗೆದಿದ್ದರೆ, ಇನ್ನೊಂದು 2016ರ ಚಿತ್ರವಾಗಿದೆ. ನಾಸಾದ ಗೊಡ್ಡರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಇಲ್ಲಿನ ಭೂವಿಜ್ಞಾನಿ ಮಿಗುವೆಲ್ ರೋಮನ್ ಅವರ ನೇತೃತ್ವದಲ್ಲಿ ಭೂಮಿಯ ಅತ್ಯಂತ ಸ್ಪಷ್ಟ ಚಿತ್ರಗಳನ್ನು ನೀಡಲು ಹೊಸ ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ವರ್ಷ ನಾಸಾ ಬಿಡುಗಡೆಗೊಳಿಸಿದ ಭೂಮಿಯ ಚಿತ್ರಗಳಲ್ಲಿ ಚಂದ್ರನ ಬೆಳಕಿನ ರಹಿತ ಭೂಮಿಯ ಚಿತ್ರಣ ನೀಡಲಾಗಿದೆ.
ನಾಸಾ-ನೋವಾ ಸುವೋಮಿ ನ್ಯಾಷನಲ್ ಪೋಲಾರ್ ಆರ್ಬಿಟಿಂಗ್ ಪಾರ್ಟ್ನರ್ ಶಿಪ್ ಸ್ಯಾಟಿಲೈಟಿನ ಮೇಲಿರುವ ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ ಮುಖಾಂತರ ಇದು ಸಾಧ್ಯವಾಗಿದೆ. ಭೂಮಿಯ ಮೇಲ್ಪದರದಲ್ಲಿರುವ ದೀಪದ ಬೆಳಕುಗಳ ಪ್ರಖರತೆ, ವಿವಿಧತೆಗಳ ಮೇಲೆ ಬೆಳಕು ಚೆಲ್ಲಬಲ್ಲ ಸಾಮರ್ಥ್ಯ ಈ ಸಾಧನಕ್ಕಿದೆಯೆನ್ನಲಾಗಿದೆ.