ಇನ್ನು ಬೇಡ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆ : ಪುರುಷರಿಗೆ ಬರಲಿದೆ ಜನನ ನಿಯಂತ್ರಣದ ಸ್ವಿಚ್!

Update: 2017-04-13 10:01 GMT

ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆಯೊಂದರಲ್ಲಿ ಜರ್ಮನಿಯ ಕಂಪನಿಯೊಂದು ಹೊಸ ಮಾದರಿಯ ಪುರುಷ ಜನನ ನಿಯಂತ್ರಣ ಸಾಧನವೊಂದನ್ನು ಅಭಿವೃದ್ಧಿ ಗೊಳಿಸಿದೆ, ತನ್ಮೂಲಕ ಜನನ ನಿಯಂತ್ರಣದ ಹೊಣೆಗಾರಿಕೆಯನ್ನು ಪುರುಷರಿಗೆ ವರ್ಗಾಯಿಸಿ ಜನನ ನಿಯಂತ್ರಣ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯೊಂದನ್ನು ತರಲು ಸಜ್ಜಾಗಿದೆ. ಕಂಪನಿಯು ಇದಕ್ಕಾಗಿ ಒಂದು ಇಂಚಿಗೂ ಕಡಿಮೆ ಉದ್ದದ, ಔನ್ಸ್‌ನ ಹತ್ತನೇ ಒಂದು ಭಾಗದಷ್ಟು ತೂಕವಿರುವ ಪುಟಾಣಿ ವಾಲ್ವ್‌ನ್ನು ಸಿದ್ಧಪಡಿಸಿದೆ.

ವೀರ್ಯವನ್ನು ಪುರುಷನ ವೃಷಣಗಳಿಗೆ ವಾಪಸ್ ಕಳುಹಿಸಲು ಆತನ ಶರೀರದೊಳಗೆ ಅಳವಡಿಸಲು ಸಾಧ್ಯವಾಗುವ ರೀತಿಯಲ್ಲಿ ಈ ವಾಲ್ವ್‌ನ್ನು ವಿನ್ಯಾಸಗೊಳಿಸಲಾಗಿದೆ. ಈ ವಾಲ್ವ್‌ನಿಂದಾಗಿ ಪುರುಷ ತಾತ್ಕಾಲಿಕವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾನೆ

ಬಿಮೆಕ್ ಎಸ್‌ಎಲ್‌ವಿ ಎಂದು ಹೆಸರಿಸಲಾಗಿರುವ ಈ ವಾಲ್ವ್ ಸಂತಾನಹರಣ ಶಸ್ತ್ರಚಿಕಿತ್ಸೆಯ ಕೆಲಸವನ್ನೇ ಮಾಡುತ್ತದೆ ಮತ್ತು ಇದನ್ನು ಪುರುಷನ ಶರೀರದೊಳಗೆ ಅಳವಡಿಸಲು ಕೇವಲ ಅರ್ಧ ಗಂಟೆ ಸಾಕು!

ವಾಲ್ವ್‌ನ ಅಳವಡಿಕೆಯ ಜೊತೆಗೆ ಪುರುಷನ ವೃಷಣಕೋಶದ ಚರ್ಮದ ಕೆಳಗಡೆ ಒಂದು ಆಫ್-ಆನ್ ಸ್ವಿಚ್‌ನ್ನು ಅಳವಡಿಸಲಾಗುತ್ತದೆ ಮತ್ತು ಅದನ್ನು ಬಳಸಿ ವಾಲ್ವ್‌ನ್ನು ನಿಯಂತ್ರಿಸಬಹುದಾಗಿದೆ. ತಂದೆಯಾಗಬೇಕೆಂದು ಪುರುಷ ಬಯಸಿದರೆ ಆತ ಸುಮ್ಮನೆ ತನ್ನ ವೃಷಣಕೋಶದ ಮೇಲೆ ಬೆರಳುಗಳನ್ನಾಡಿಸಿ ಸ್ವಿಚ್‌ನ್ನು ಆನ್ ಮಾಡಿದರಾಯಿತು. ಇದು ವೀರ್ಯವು ವೃಷಣಕ್ಕೆ ವಾಪಸಾಗುವುದನ್ನು ತಡೆದು ಅದು ಹೊರಚಿಮ್ಮುವಂತೆ ಮಾಡುತ್ತದೆ.

ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಈ ಸಾಧನವು ಹೆಚ್ಚಿನ ಪ್ರಯೋಜನ ಗಳನ್ನು ಹೊಂದಿದೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯಲ್ಲಿ ವೀರ್ಯವನ್ನು ವೃಷಣಗಳಿಂದ ವಿಸರ್ಜನಾ ನಾಳಕ್ಕೆ ಸಾಗಿಸುವ ನಳಿಕೆಗಳನ್ನು ಕತ್ತರಿಸಲಾಗುತ್ತದೆ. ಬಿಮೆಕ್ ಎಸ್‌ಎಲ್‌ವಿ ಅಳವಡಿಕೆಯಿಂದ ಈ ನಳಿಕೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಬೇಕಾದ ಅಗತ್ಯವಿರು ವುದಿಲ್ಲ. ಕಂಪನಿಯು ಈ ವಾಲ್ವ್‌ಗಳನ್ನು ಪ್ರಾಯೋಗಿಕವಾಗಿ 25 ಪುರುಷರಲ್ಲಿ ಅಳವಡಿಸಲಿದೆ ಎಂದು ಸಂಶೋಧಕರ ತಂಡದ ವಕ್ತಾರ ವೊಲ್ಗಾಂಗ್ ಬಹಮನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News