ಅಮೆರಿಕದ ಮೊದಲ ಮುಸ್ಲಿಮ್ ಮಹಿಳಾ ನ್ಯಾಯಾಧೀಶೆ ನಿಗೂಢ ಸಾವು

Update: 2017-04-13 15:10 GMT

ನ್ಯೂಯಾರ್ಕ್, ಎ. 13: ಅಮೆರಿಕದ ಮೊದಲ ಮುಸ್ಲಿಮ್ ಕರಿಯ ಮಹಿಳಾ ನ್ಯಾಯಾಧೀಶೆ ಶೈಲಾ ಅಬ್ದುಸ್ ಸಲಾಮ್ ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

ನ್ಯೂಯಾರ್ಕ್‌ನ ಅತ್ಯುನ್ನತ ನ್ಯಾಯಾಲಯದ ಅಸೋಸಿಯೇಟ್ ನ್ಯಾಯಾಧೀಶೆಯಾಗಿದ್ದ 65 ವರ್ಷದ ಶೈಲಾ, ಮ್ಯಾನ್‌ಹಟನ್‌ನ ಪಶ್ಚಿಮ ಭಾಗದ ನದಿಯಲ್ಲಿ ತೇಲುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಪೊಲೀಸರು ಅವರನ್ನು ನದಿಯಿಂದ ಮೇಲಕ್ಕೆತ್ತಿದ ಬಳಿಕ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ವಾಶಿಂಗ್ಟನ್ ಡಿಸಿ ನಿವಾಸಿಯಾಗಿರುವ ಶೈಲಾ ಅವರನ್ನು 2013ರಲ್ಲಿ ನ್ಯೂಯಾರ್ಕ್ ರಾಜ್ಯದ ಮೇಲ್ಮನವಿ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಮೇಲ್ಮನವಿ ನ್ಯಾಯಾಲಯಕ್ಕೆ ನೇಮಕಗೊಂಡ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ ಅವರಾಗಿದ್ದರು.

ಅವರು ಅಮೆರಿಕದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಮೊದಲ ಮುಸ್ಲಿಮ್ ಮಹಿಳೆಯಾಗಿದ್ದಾರೆ ಎಂದು ಅಮೆರಿಕನ್ ಪೊಲಿಟಿಕಲ್ ಹಿಸ್ಟರಿಯ ಪ್ರಿನ್ಸ್‌ಟನ್ ಎನ್‌ಸೈಕ್ಲೊಪೀಡಿಯ ತಿಳಿಸಿದೆ.

ಅವರು ತನ್ನ ನ್ಯೂಯಾರ್ಕ್ ಮನೆಯಿಂದ ಬುಧವಾರ ಬೆಳಗ್ಗೆ ನಾಪತ್ತೆಯಾಗಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News