ಸಿರಿಯ ನಿರ್ಣಯಕ್ಕೆ ರಶ್ಯ ವೀಟೊ
ವಿಶ್ವಸಂಸ್ಥೆ, ಎ. 13: ಸಿರಿಯದಲ್ಲಿ ನಡೆದಿದೆಯೆನ್ನಲಾದ ರಾಸಾಯನಿಕ ದಾಳಿಯ ಕುರಿತ ತನಿಖೆಗೆ ಸಿರಿಯ ಸರಕಾರ ಸಹಕಾರ ನೀಡಬೇಕು ಎಂದು ಒತ್ತಾಯಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯಕ್ಕೆ ರಶ್ಯ ಬುಧವಾರ ವೀಟೊ (ತಡೆ) ಚಲಾಯಿಸಿದೆ.
ಕಳೆದ ವಾರ ನಡೆದ ದಾಳಿಯನ್ನು ಸಿರಿಯ ಅಧ್ಯಕ್ಷ ಬಶರ್ ಅಲ್ ಅಸದ್ ನಡೆಸಿದ್ದಾರೆ ಎಂಬುದಾಗಿ ಪಾಶ್ಚಿಮಾತ್ಯ ದೇಶಗಳು ಭಾವಿಸಿವೆ.
ತನ್ನ ಸಿರಿಯ ಮಿತ್ರನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಕ್ಷಿಸಲು ರಶ್ಯ ಇದೀಗ ಎಂಟನೆ ಬಾರಿ ತನ್ನ ವೀಟೊ ಅಧಿಕಾರವನ್ನು ಚಲಾಯಿಸಿದಂತಾಗಿದೆ.
ಸಿರಿಯದ ಖಾನ್ ಶೇಖೂನ್ ಪಟ್ಟಣದಲ್ಲಿ ಎಪ್ರಿಲ್ 4ರಂದು ನಡೆದಿದೆಯೆನ್ನಲಾದ ‘ಸ್ಯಾರಿನ್’ ಅನಿಲ ದಾಳಿಗೆ ಪ್ರತಿಯಾಗಿ ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಗಳು ಈ ನಿರ್ಣಯವನ್ನು ಮಂಡಿಸಿವೆ.
ವಿಷಾನಿಲ ದಾಳಿಯಲ್ಲಿ 31 ಮಕ್ಕಳು ಸೇರಿದಂತೆ 87 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಚೀನಾ ಮತದಾನದಿಂದ ಹೊರಗುಳಿದಿತ್ತು. ಕಝಕಿಸ್ತಾನ ಮತ್ತು ಇಥಿಯೋಪಿಗಳೂ ಮತದಾನದಲ್ಲಿ ಭಾಗವಹಿಸಿರಲಿಲ್ಲ.
ಬೊಲಿವಿಯ ನಿರ್ಣಯಕ್ಕೆ ವಿರುದ್ಧವಾಗಿ ಮತ ಹಾಕಿತು ಹಾಗೂ ಇತರ 10 ಸದಸ್ಯರು ನಿರ್ಣಯವನ್ನು ಬೆಂಬಲಿಸಿದರು.
ಅಮೆರಿಕ ಮತ್ತು ರಶ್ಯಗಳ ಪ್ರಮಾಣದ ನಡುವೆ ‘ಕಡಿಮೆ ನಂಬಿಕೆಯಿದೆ’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಮಾಸ್ಕೊದಲ್ಲಿ ಹೇಳಿದ ಬಳಿಕ ರಶ್ಯ ನಿರ್ಣಯಕ್ಕೆ ವೀಟೊ ಚಲಾಯಿಸಿತು.
ರಶ್ಯದ ವಿದೇಶ ಸಚಿವರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ಟಿಲರ್‌ಸನ್ ಮಾಸ್ಕೊದಲ್ಲಿದ್ದಾರೆ.
ಕರಡು ನಿರ್ಣಯವು ರಾಸಾಯನಿಕ ದಾಳಿಯನ್ನು ಖಂಡಿಸುತ್ತದೆ ಹಾಗೂ ‘ರಾಸಾಯನಿಕ ಅಸ್ತ್ರಗಳ ನಿಷೇಧಕ್ಕಾಗಿನ ಸಂಘಟನೆ’ಯ ತನಿಖಾಧಿಕಾರಿಗಳಿಗೆ ಭದ್ರತಾ ಮಂಡಳಿಯ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ.
ಎಪ್ರಿಲ್ 4ರ ವಿಮಾನ ಹಾರಾಟಗಳ ಕಾರ್ಯಸೂಚಿ, ವಿಮಾನ ಹಾರಾಟಗಳ ವಿವರ ಮತ್ತು ಇತರ ಮಾಹಿತಿಗಳನ್ನು ಒದಗಿಸುವಂತೆ ಕರಡು ನಿರ್ಣಯವು ಸಿರಿಯ ಸರಕಾರವನ್ನು ಒತ್ತಾಯಿಸುತ್ತದೆ.