ಬದ್ರಿ, ತಿಯೆ ಹ್ಯಾಟ್ರಿಕ್ ದಾಖಲೆ

Update: 2017-04-14 18:18 GMT

ಹೊಸದಿಲ್ಲಿ,ಎ.14: ಗುಜರಾತ್ ಲಯನ್ಸ್ ತಂಡದ ವೇಗಿ ಆ್ಯಂಡ್ರೋ ತಿಯೆ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಯಾಮುವೆಲ್ ಬದ್ರಿ ಶನಿವಾರ ನಡೆದ ಐಪಿಎಲ್‌ನ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್‌ಗಳ ದಾಖಲೆ ನಿರ್ಮಿಸಿದ್ದಾರೆ.

ಬದ್ರಿ ಅವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 12ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಪಾರ್ಥಿವ್ ಪಟೇಲ್ , ಮೆಕ್ಲೀನಘನ್ ಮತ್ತು ರೋಹಿತ್ ಶರ್ಮ ವಿಕೆಟ್‌ಗಳನ್ನು ಉಡಾಯಿಸುವ ಮೂಲಕ 10ನೆ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ದಾಖಲೆ ನಿರ್ಮಿಸಿದರು.

 ವೆಸ್ಟ್‌ಇಂಡಿಸ್‌ನ 36ರ ಹರೆಯದ ಬದ್ರಿ 3ನೆ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಅವರು ಮನ್‌ದೀಪ್ ಸಿಂಗ್ ವಿಕೆಟ್ ಪಡೆಯುವ ಮೂಲಕ 9ರನ್ ನೀಡಿ 4 ವಿಕೆಟ್ ಪಡೆದರು. ಅವರ ಸಾಧನೆ 4-1-9-4. ಬದ್ರಿ ಅವರು ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ 12ನೆ ಬೌಲರ್ ಎನಿಸಿಕೊಂಡಿದ್ದಾರೆ.

 ರಾಜ್‌ಕೋಟ್‌ನಲ್ಲಿ ನಡೆದ ಐಪಿಎಲ್‌ನ 13ನೆ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಗುಜರಾತ್ ಲಯನ್ಸ್‌ನ ಆ್ಯಂಡ್ರೋ ತಿಯೆ ಹ್ಯಾಟ್ರಿಕ್ ಬರೆದರು. ಇದರೊಂದಿಗೆ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ದಾಖಲಿಸಿದ ವಿಶ್ವದ 12ನೆ ಆಟಗಾರ ಎನಿಸಿಕೊಂಡರು.

ಆಸ್ಟ್ರೇಲಿಯದ ಬೌಲರ್ ತಿಯೆ ಐಪಿಎಲ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವುದು ವಿಶೇಷ.

 ಕೊನೆಯ ಓವರ್‌ನಲ್ಲಿ ತಿಯೆ ಅವರು ಅಂಕಿತ್ ಶರ್ಮ, ಮನೋಜ್ ತಿವಾರಿ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ದಾಖಲೆ ಬರೆದರು. ತಿಯೆ ಅವರು ಇದಕ್ಕೂ ಮೊದಲು ತ್ರಿಪಾಠಿ ಮತ್ತು ಸ್ಕೋಕ್ಸ್ ವಿಕೆಟ್ ಪಡೆದಿದ್ದರು. ತಿಯೆ ಸಾಧನೆ 4-0-17-5
ಈ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಪುಣೆ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News