ಮರಗಳಿಗೂ ಆ್ಯಸಿಡ್ ಸುರಿಯುವವರು!
ಮಾನ್ಯರೆ,
‘ಉದ್ಯಾನ ನಗರಿ’ ಎಂದೇ ಖ್ಯಾತಿ ಪಡೆದ ಬೆಂಗಳೂರು ನಗರದಲ್ಲಿ ಹಲವು ಕಡೆ ರಸ್ತೆಯ ಇಕ್ಕೆಲಗಳಲ್ಲಿ ಮರ-ಗಿಡಗಳಿವೆ. ಈಗ ಇವುಗಳ ಮೇಲೂ ಕೆಲವರ ಕಣ್ಣು ಬಿದ್ದಿದ್ದು, ಇಲ್ಲಿರುವ ಕೆಲ ಮರಗಳಿಗೆ ಆ್ಯಸಿಡ್ ಹಾಕಿ ಸಾಯಿಸಿ ಮರಗಳನ್ನು ಮಾರಾಟ ಮಾಡುವ ಜಾಲ ಶುರುವಾಗಿದೆ.
ಮಹದೇವಪುರ ಪೊಲೀಸ್ ಠಾಣೆ ಸಮೀಪ ಜಾಹೀರಾತು ಫಲಕಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣವೊಡ್ಡಿ 10 ಮರಗಳ ರೆಂಬೆ ಕತ್ತರಿಸಲಾಗಿತ್ತು. ಹಾಗೆಯೇ ಮಾರತಹಳ್ಳಿ ಬಳಿ 17 ಮರಗಳ ಬುಡಕ್ಕೆ ಆ್ಯಸಿಡ್ ಹಾಕಲಾಗಿತ್ತು. ಈ ಬಗ್ಗೆ ಕೆಲ ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ಸಹ ನೀಡಿದ್ದಾರೆ. ಬೆಂಗಳೂರಲ್ಲಿರುವ ಮರ-ಗಿಡಗಳ ರಕ್ಷಣೆಯ ಹೆಚ್ಚಿನ ಜವಾಬ್ದಾರಿ ಬಿಬಿಎಂಪಿಯ ಅರಣ್ಯ ವಿಭಾಗಕ್ಕಿದೆ. ಆದರೆ ಹಲವು ಮರಗಳಿಗೆ ಆ್ಯಸಿಡ್ ಹಾಕಿದ್ದರೂ ದುಷ್ಕರ್ಮಿಗಳ ವಿರುದ್ಧ ಇನ್ನೂ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಯಾವ ಅಧಿಕಾರಿಗಳ ಸಮ್ಮುಖದಲ್ಲಿ ಆಸಿಡ್ ಹಾಕಲಾಗಿದೆ ಎಂಬುದರ ಕುರಿತು ಬಿಬಿಎಂಪಿ ತನಿಖೆ ನಡೆಸುವುದಕ್ಕೆ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿಗೆ ಮರಗಳೇ ಸೌಂದರ್ಯ. ಆದ್ದರಿಂದ ಕೂಡಲೇ ಮರಗಳ ನಾಶಕ್ಕೆ ಯತ್ನಿಸಿದವರ ವಿರುದ್ಧ ಸಂಬಂಧಿಸಿದವರು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.