ಈತ ದಕ್ಷ ಪೊಲೀಸ್ ಅಧಿಕಾರಿ, ಪ್ರೀತಿಯ ಪತಿ, ಅಕ್ಕರೆಯ ಅಪ್ಪ , ವಿಶ್ವದ ಭಯಾನಕ ಸರಣಿ ಅತ್ಯಾಚಾರಿ ಹಾಗು ಹಂತಕ !
ಮಾಸ್ಕೊ, ಎ. 15: ಸರಣಿ ಅತ್ಯಾಚಾರ ಮತ್ತು ಕೊಲೆ ಅಪರಾಧಕ್ಕಾಗಿ ಜೈಲು ಸೇರಿರುವ ರಶ್ಯದ ಮಾಜಿ ಪೊಲೀಸ್ ಅಧಿಕಾರಿ ಮಿಖೈಲ್ ಪೊಪ್‌ಕೊವ್ ಕನಿಷ್ಠ 82 ಕೊಲೆಗಳನ್ನು ಮಾಡಿರಬೇಕೆಂದು ಭಾವಿಸಲಾಗಿದೆ.
ಎಷ್ಟು ಮಹಿಳೆಯರನ್ನು ಅತ್ಯಾಚಾರಗೈದು ಕೊಲೆ ಮಾಡಿರುವೆ ಎಂಬುದಾಗಿ ನ್ಯಾಯಾಲಯದಲ್ಲಿ ಮಾಜಿ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಲಾಯಿತು. ತಲೆಯಾಡಿಸಿದ ಆತ, ‘‘ನಿಖರವಾಗಿ ಎಷ್ಟೆಂದು ನನಗೆ ಗೊತ್ತಿಲ್ಲ’’ ಎಂದುತ್ತರಿಸಿದನು. ‘‘ನಾನು ಅದರ ಲೆಕ್ಕವನ್ನು ಇಟ್ಟಿಲ್ಲ’’ ಎಂದನು.
ಆತ 82 ಅತ್ಯಾಚಾರ-ಕೊಲೆಗಳನ್ನು ಮಾಡಿರಬಹುದು ಎನ್ನುವುದು ಈ ವಾರ ಬಹಿರಂಗವಾಗಿದೆ. ಅದಕ್ಕಿಂತಲೂ ಹೆಚ್ಚು ಆಗಿರುವ ಸಾಧ್ಯತೆಯಿದೆ.
ಸೈಬೀರಿಯನ್ ರಶ್ಯದ ನಗರ ಅಂಗಾರ್ಸ್‌ಕ್‌ನ ಸುತ್ತಮುತ್ತ 22 ಮಹಿಳೆಯರನ್ನು ಕೊಲೆಗೈದಿರುವುದು ಸಾಬೀತಾದ ಬಳಿಕ 2015ರಲ್ಲಿ 53 ವರ್ಷದ ಸರಣಿ ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಈಗ ಪ್ರಾಸಿಕ್ಯೂಟರ್‌ಗಳು ಸರಣಿ ಕೊಲೆಗಳ ಪಟ್ಟಿಗೆ ಇನ್ನೂ 60 ಕೊಲೆಗಳನ್ನು ಸೇರಿಸಿದ್ದಾರೆ.ಆದರೆ, ವಿಶೇಷವೆಂದರೆ ‘ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ, ಪ್ರೀತಿಸುವ ಗಂಡನಾಗಿ ಮತ್ತು ಕಾಳಜಿ ವಹಿಸುವ ತಂದೆಯಾಗಿ ಆದರ್ಶ ಜೀವನ’ ನಡೆಸುತ್ತಿರುವಾಗಲೇ ಪೊಪ್‌ಕೊವ್ ಈ ಸರಣಿ ಅತ್ಯಾಚಾರ ಕೊಲೆಗಳನ್ನು ನಡೆಸಿದ್ದಾನೆ.
ಈ ಆರೋಪಗಳು ಸಾಬೀತಾದರೆ, ಆತ ಇತಿಹಾಸದ ಅತ್ಯಂತ ಭಯಾನಕ ಸರಣಿ ಹಂತಕನಾಗುತ್ತಾನೆ.ಆದಾಗ್ಯೂ, ಈ ಸಂಖ್ಯೆಗಳು 18 ವರ್ಷಗಳ ಅವಧಿಯಲ್ಲಿ ಆತ ನಡೆಸಿದ ಭೀಭತ್ಸ ಕ್ರೌರ್ಯವನ್ನು ಬಣ್ಣಿಸಲಾರವು.ಆತ ಹಲವಾರು ಮಹಿಳೆಯರ ತಲೆ ಕಡಿದಿದ್ದನು.
ಇತರ ಹಲವರ ಹೃದಯಗಳನ್ನು ಬಗೆದು ತೆಗೆದಿದ್ದನು. ಅವರೆಲ್ಲರನ್ನೂ ಅತ್ಯಾಚಾರ ಮಾಡಲಾಗಿತ್ತು. ಹಲವು ಸಂತ್ರಸ್ತರ ದೇಹಗಳನ್ನು ವಿಕಾರಗೊಳಿಸಿದ್ದನು.
‘‘ಒಂದು ಬದುಕಿನಲ್ಲಿ ನಾನು ಶ್ರೀಸಾಮಾನ್ಯನಾಗಿದ್ದೆ ಹಾಗೂ ಇನ್ನೊಂದು ಬದುಕಿನಲ್ಲಿ ನಾನು ಕೊಲೆಗಳನ್ನು ಮಾಡಿದೆ’’ ಎಂದು ಆತ ಪೊಲೀಸರಿಗೆ ಹೇಳಿದ್ದನು.