ಗೆಲುವಿನ ನಗೆ ಬೀರಿದ ಕೆಕೆಆರ್
ಕೋಲ್ಕತಾ, ಎ.15: ಇಲ್ಲಿ ನಡೆದ ಐಪಿಎಲ್‌ನ ಹದಿನಾಲ್ಕನೆ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ 17 ರನ್‌ಗಳ ರೋಚಕ ಜಯ ದಾಖಲಿಸಿದೆ.
ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 173 ರನ್‌ಗಳ ಸವಾಲನ್ನು ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತು.
ಕ್ರಿಸ್ ವೋಕ್ಸ್(49ಕ್ಕೆ2 ), ಟ್ರೆಂಟ್ ಬೌಲ್ಟ್(33ಕ್ಕೆ 1), ನರೇನ್(18ಕ್ಕೆ 1), ಕುಲದೀಪ್ ಯಾದವ್(23ಕ್ಕೆ 1), ಯೂಸುಫ್ ಪಠಾಣ್(2ಕ್ಕೆ 1) ದಾಳಿಯನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ದಡ ಸೇರುವಲ್ಲಿ ಸನ್‌ರೈಸರ್ಸ್ ಎಡವಿತು.
ನಾಯಕ ಡೇವಿಡ್ ವಾರ್ನರ್(26), ಶಿಖರ್ ಧವನ್(23), ಹೆನ್ರಿಕ್ಸ್(13), ಯುವರಾಜ್ ಸಿಂಗ್(26), ದೀಪಕ್ ಹೂಡಾ(13), ಬೆನ್ ಕಟ್ಟಿಂಗ್(15), ನಮನ್ ಓಜಾ(ಔಟಾಗದೆ 11) ಮತ್ತು ಬಿಪುಲ್ ಶರ್ಮ (ಔಟಾಗದೆ 21) ಎರಡಂಕೆಯ ಸ್ಕೋರ್ ದಾಖಲಿಸಿದರೂ ಅವರ ಕೊಡುಗೆ ತಂಡದ ಗೆಲುವಿಗೆ ಸಾಕಾಗಲಿಲ್ಲ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು
ಸುನೀಲ್ ನರೇನ್ ಕಳೆದ ಪಂದ್ಯದಲ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಕಳೆದ ಪಂದ್ಯದಲ್ಲಿ ಪ್ರದರ್ಶನ ನೀಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ನಾಯಕ ಗೌತಮ್ ಗಂಭಿರ್ ಜೊತೆ ಇನಿಂಗ್ಸ್ ಆರಂಭಿಸಿದ ನರೇನ್ 9 ಎಸೆತಗಳಲ್ಲಿ 1 ಬೌಂಡರಿ ಇರುವ 6 ರನ್ ಗಳಿಸಿ ಭುವನೇಶ್ವರ ಕುಮಾರ್ ಎಸೆತವನ್ನು ಎದುರಿಸಲಾಗದೆ ಪೆವಿಲಿಯನ್ ಸೇರಿದರು.
ನಾಯಕ ಗಂಭೀರ್ ಬ್ಯಾಟಿಂಗ್ ಎಂದಿನಂತೆ ಇರಲಿಲ್ಲ. ಅಫ್ಘಾನಿಸ್ತಾನದ ರಶೀದ್ ಖಾನ್ ಎಸೆತದಲ್ಲಿ ಔಟಾದರು.ಆದರೆ ಕರ್ನಾಟಕದ ರಣಜಿ ತಂಡದ ಆಟಗಾರರಾದ ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ತಂಡವನ್ನು ಆಧರಿಸಿದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 52 ಎಸೆತಗಳಲ್ಲಿ 77 ರನ್ ಸೇರ್ಪಡೆಗೊಂಡಿತು. ಇದರಿಂದಾಗಿ ಕೋಲ್ಕತಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಉತ್ತಪ್ಪ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಇರುವ 68 ರನ್ ದಾಖಲಿಸಿ ಕಟ್ಟಿಂಗ್‌ಗೆ ವಿಕೆಟ್ ಒಪ್ಪಿಸಿದರು. ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಉತ್ತಪ್ಪ ಪಂದ್ಯಶ್ರೇಷ್ಠ ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.
ಮನೀಷ್ ಪಾಂಡೆ ಅವರು ಬಿಪುಲ್ ಶರ್ಮ ಓವರ್‌ನ ಮೊದಲ ಎಸೆತದಲ್ಲಿ ಜೀವದಾನ ಪಡೆದರು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಆದರೆ 4 ರನ್‌ನಿಂದ ಅರ್ಧಶತಕ ವಂಚಿತಗೊಂಡರು. 35 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಇರುವ 46 ರನ್ ಗಳಿಸಿದರು. ಉತ್ತಪ್ಪ ಮತ್ತು ಪಾಂಡೆ ನಿರ್ಗಮನದ ಬಳಿಕ ನೆಹ್ರಾ ಮತ್ತು ಭುವನೇಶ್ವರ ಕುಮಾರ್ ಎರಡು ವಿಕೆಟ್‌ಗಳನ್ನು ಬೇಗನೆ ಉಡಾಯಿಸಿದರು.
ಸೂರ್ಯಕುಮಾರ್ ಯಾದವ್(4) ಮತ್ತು ಗ್ರಾಂಡ್‌ಹೊಮ್ಮೆ (0)ಬೇಗನೆ ಪೆವಿಲಿಯನ್ ಸೇರಿದರು. ಆದರೆ ಆಲ್‌ರೌಂಡರ್ ಯೂಸುಫ್ ಪಠಾಣ್ ಔಟಾಗದೆ 21 ರನ್ (15ಎ, 1ಬೌ,1ಸಿ) ಗಳಿಸಿದರು.
ಸನ್‌ರೈಸರ್ಸ್ ತಂಡದ ಭುವನೇಶ್ವರ ಕುಮಾರ್ 20ಕ್ಕೆ 3 ವಿಕೆಟ್, ಆಶಿಶ್ ನೆಹ್ರಾ, ಬೆನ್ ಕಟ್ಟಿಂಗ್ ಮತ್ತು ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.