×
Ad

ಮಗುವಾಗದ ಆ ದಂಪತಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯಿತು ಅರಗಿಸಿಕೊಳ್ಳಲಾಗದ ಆಘಾತಕಾರಿ ಸತ್ಯ!

Update: 2017-04-16 20:29 IST

ಇದೊಂದು ವಿಚಿತ್ರವಾದರೂ ಸತ್ಯ ಘಟನೆ. ಆ ದಂಪತಿ ಅನ್ಯೋನ್ಯವಾಗಿದ್ದರು. ಆದರೆ ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಐವಿಎಫ್ ಕ್ಲಿನಿಕ್‌ಗೆ ತೆರಳಿ ಡಿಎನ್‌ಎ ಪರೀಕ್ಷೆ ಮಾಡಿಸಿಕೊಂಡಾಗ ಹೊರಬಿತ್ತು ಈ ಆಘಾತಕಾರಿ ಸತ್ಯ. ಈ ಘಟನೆ ನಡೆದದ್ದು ಮಿಸಿಸಿಪ್ಪಿಯಲ್ಲಿ. ಬಹುಶಃ ಬಾಲಿವುಡ್ ಚಿತ್ರವಾಗಬಹುದಾದ ವಿಚಿತ್ರ ಘಟನೆ.

ಆ ದಂಪತಿ ಅವಳಿ ಮಕ್ಕಳು. ಮಿಸಿಸಿಪ್ಪಿಯ ಸಂತಾನಶಾಸ್ತ್ರ ತಜ್ಞ ಈ ವಿಷಯ ಬಹಿರಂಗಪಡಿಸಿದ್ದಾರೆ. ಇಬ್ಬರ ಡಿಎನ್‌ಎ ತಪಾಸಣೆ ಮಾಡಿದಾಗ, ಸಾಮ್ಯತೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಈ ಅವಳಿ ಮಕ್ಕಳು ಬಾಲ್ಯದಲ್ಲಿದ್ದಾಗಲೇ ತಂದೆ- ತಾಯಿ ಕಾರು ಅಪಘಾತದಲ್ಲಿ ಮೃತಪಟ್ಟು, ಬೇರ್ಪಟ್ಟಿದ್ದರು. ಬಳಿಕ ಇಬ್ಬರೂ ಮಕ್ಕಳನ್ನು ಬೇರೆ ಬೇರೆ ಕುಟುಂಬಗಳು ದತ್ತು ಪಡೆದಿದ್ದವು. ಎರಡೂ ಕುಟುಂಬಗಳಿಗೆ ಸಂಪರ್ಕವೇ ಇರಲಿಲ್ಲ.

ಈಗ ಆಘಾತಕಾರಿ ಸಂಗತಿ ತಿಳಿದ  ದಂಪತಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಏಕೆಂದರೆ ಈ ದಕ್ಷಿಣ ರಾಜ್ಯದಲ್ಲಿ ಸಹೋದರ- ಸಹೋದರಿ ವಿವಾಹ ಕಾನೂನುಬಾಹಿರ. ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ದಂಪತಿ ಹಾಗೂ ವೈದ್ಯರ ಹೆಸರನ್ನು ಬಹಿರಂಗಪಡಿಸಿಲ್ಲ. ಈ ವಿಷಯ ಗೊತ್ತಾದ ಬಳಿಕ ಪತಿ- ಪತ್ನಿ ತಮ್ಮ ಜೀವನದ ಬಿಡಿ ಘಟನೆಗಳನ್ನು ಸಂಘಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮಿಸಿಸಿಪ್ಪಿ ಹೆರಾಲ್ಡ್ ವರದಿ ಮಾಡಿದೆ.

ತಂದೆ ತಾಯಿ ಅಪಘಾತದಲ್ಲಿ ಮೃತಪಟ್ಟಾಗ ದತ್ತು ಸ್ವೀಕಾರ ಪ್ರಕ್ರಿಯೆ ವೇಳೆ ದಾಖಲಾತಿಯಲ್ಲಿ ಆಗಿರುವ ಲೋಪ ಇವೆಲ್ಲಕ್ಕೆ ಕಾರಣ. ದತ್ತು ಪಡೆದ ಪೋಷಕರು ಕೂಡಾ ತಾವು ದತ್ತು ಪಡೆದ ಮಗುವಿನ ಅಣ್ಣ/ತಂಗಿ ಇದ್ದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕಾಲೇಜು ಸೇರಿದಾಗ ಇಬ್ಬರು ಪರಸ್ಪರ ಸಂಧಿಸಿದರು. ಸಮಾನ ಹಿನ್ನೆಲೆಯಿಂದ ಬಂದ ಹಿನ್ನೆಲೆಯಲ್ಲಿ ಬಾಂಧವ್ಯ ಬೆಳೆದು, ಪ್ರೇಮವಾಗಿ ಮಾರ್ಪಟ್ಟಿತು. ಆದರೆ ಈ ವಿಚಾರ ಮೊದಲೇ ಬಹಿರಂಗವಾಗುತ್ತಿದ್ದರೆ, ಮುಂದಿನ ನೋವು ತಪ್ಪಿಸಬಹುದಿತ್ತು ಎಂದು ವೈದ್ಯರು ಹೇಳುತ್ತಾರೆ.

ಸಂತಾನಹೀನ ದಂಪತಿಗೆ ಸೂಕ್ತ ಚಿಕಿತ್ಸೆ ನೀಡುವುದು ನನ್ನ ಕರ್ತವ್ಯ. ನನ್ನ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಸಂತಾನಹೀನ ದಂಪತಿಗೆ ಸಂತಾನಭಾಗ್ಯ ಒದಗಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯ ಹೇಳುತ್ತಾರೆ. ಇಲ್ಲಿನ ಕಾನೂನಿನ ಪ್ರಕಾರ ಸಹೋದರ/ ಸಹೋದರಿ ನಡುವಿನ ವಿವಾಹಕ್ಕೆ 10 ವರ್ಷ ಜೈಲು ಶಿಕ್ಷೆ ಹಾಗೂ 500 ಡಾಲರ್ ದಂಡ ವಿಧಿಸಲಾಗುತ್ತದೆ. ಆದರೆ ಈ ವಿಚಿತ್ರ ಸನ್ನಿವೇಶದಿಂದಾಗಿ ಈ ದಂಪತಿ ವಿರುದ್ಧ ಕಾನೂನು ತೊಡಕು ಎದುರಾಗದು ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News