ಯುವಕನನ್ನು ಸೇನಾ ವಾಹನಕ್ಕೆ ಕಟ್ಟಿದ ಆರೋಪ; ಸೇನೆ ವಿರುದ್ಧ ಎಫ್ ಐಆರ್
ಶ್ರೀನಗರ, ಎ.17:ಗಲಭೆ ಪೀಡಿತ ಕಾಶ್ಮೀರದಲ್ಲಿ ಇತ್ತೀಚೆಗೆ ಯುವಕನೊಬ್ಬನನ್ನು ಸೇನೆಯ ಜೀಪಿನ ಬಾನೆಟ್‌ಗೆ ಕಟ್ಟಿ ’ಮಾನವ ಗುರಾಣಿ’ಯಾಗಿ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಸೇನೆ ವಿರುದ್ಧ ದಾಖಲಾಗಿರುವ ಎಫ್ ಐಆರ್ ನಲ್ಲಿ ವ್ಯಕ್ತಿಯ ಅಪಹರಣ ಮಾಡಿ ಆತನ ಪ್ರಾಣಕ್ಕೆ ಹಾನಿ ತಂದೊಡ್ಡಿದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ.
ವ್ಯಕ್ತಿಯನ್ನು ಜೀಪಿಗೆ ಕಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರು ಪೊಲೀಸರಿಂದ ವರದಿ ಕೇಳಿದ್ದರು. ಇದೇ ವೇಳೆ ಭಾರತೀಯ ಸೇನೆ ಆಂತರಿಕ ತನಿಖೆಗೆ ಆದೇಶ ನೀಡಿತ್ತು. ಸುದ್ದಿಗಾರರು ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಗಮನ ಸೆಳೆದಾಗ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಎ.9 ರಂದು ಉಗ್ರರ ವಿರುದ್ಧ ಸೇನಾಪಡೆಯ ಕಾರ್ಯಾಚರಣೆ ವೇಳೆ ಸ್ಥಳೀಯರು ಸೇನೆಯತ್ತ ಕಲ್ಲು ತೂರಾಟ ನಡೆಸಿ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಈ ವೇಳೆ ಸೇನಾಪಡೆಗಳು ಯುವಕನೊಬ್ಬನನ್ನು ಹಿಡಿದು ಜೀಪಿಗೆ ಕಟ್ಟಿ ಅಮಾನವೀಯವಾಗಿ ವರ್ತಿಸಿದ್ದರೆಂದು ಹೇಳಲಾಗಿದೆ.
ಕಾಶ್ಮೀರದಲ್ಲಿ ಸ್ಥಳೀಯರು ಮತ್ತು ಯೋಧರ ನಡುವೆ ಸಂಘರ್ಷ ಆಗಾಗ ಕಂಡು ಬರುತ್ತಿದ್ದು, ಇತ್ತೀಚೆಗೆ ಯೋಧನೋರ್ವನನ್ನು ಸ್ಥಳೀಯರು ಥಳಿಸಿದ್ದ ವಿಡಿಯೋ ವೈರಲ್ ಆಗಿತ್ತು.