ಕಾಸರಗೋಡಿನ ಎಂಡೋಸಲ್ಫಾನ್ ಪೀಡಿತ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ: ಮಕ್ಕಳ ಹಕ್ಕು ಆಯೋಗ
ತಿರುವನಂತಪುರಂ, ಎ. 17: ಕಾಸರಗೋಡು ಜಿಲ್ಲೆಯ ಎಂಡೊಸಲ್ಫಾನ್ ಪೀಡಿತ ಪ್ರದೇಶಗಳ ಮಕ್ಕಳಿಗೆ ಸರಿಯಾಗಿ ಪೌಷ್ಠಿಕ ಆಹಾರ ವಿತರಣೆಯಾಗಿಲ್ಲ ಎಂದು ಮಕ್ಕಳ ಆಯೋಗ ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದಿದೆ . ಸರಕಾರ ಇಲ್ಲಿನ ಮಕ್ಕಳ ಆಹಾರಕ್ಕಾಗಿ ಒದಗಿಸಿದ ಗ್ರಾಂಟ್ ಏನೇನೂ ಸಾಲದು ಎಂದು ಮಕ್ಕಳ ಆಯೋಗ ಹೇಳಿದೆ.
ಈ ವಿಷಯದಲ್ಲಿ ಸರಕಾರದಿಂದ ಗಂಭೀರ ಲೋಪವಾಗಿದ್ದು, ಸಂತ್ರಸ್ತರಿಗಾಗಿ ನಡೆಸಲಾಗುವ ಪರಿಹಾರ ಕಾರ್ಯಗಳನ್ನು ಏಕೀಕರಣಗೊಳಿಸುವ ಸೆಲ್ ಸಭೆ ಕಳೆದ ಒಂಬತ್ತು ತಿಂಗಳಿಂದ ನಡೆದೇ ಇಲ್ಲ ಎಂದು ಅದು ತಿಳಿಸಿದೆ. ಎಂಡೊ ಸಂತ್ರಸ್ತರನ್ನು ಗುರುತಿಸಲು 34 ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿ 5837 ಮಂದಿಯ ಪಟ್ಟಿ ತಯಾರಿಸಲಾಗಿದೆ. ಆದರೆ ಕೊನೆಯ ಆರೋಗ್ಯ ಶಿಬಿರ 2013ರಲ್ಲಿ ನಡೆದಿದೆ. ಹೊಸ ಎಂಡೋಪೀಡಿತರನ್ನು ಗುರುತಿಸಿ ಚಿಕಿತ್ಸೆ ಸೌಲಭ್ಯ ನೀಡಲು, ಪರಿಹಾರಕ್ಕೆ ಅರ್ಹರಾದವರನ್ನು ಹೊಸದಾಗಿ ಗುರುತಿಸಲು ಇಂತಹ ಆರೋಗ್ಯ ಶಿಬಿರಗಳಿಂದ ಮಾತ್ರ ಸಾಧ್ಯವಿದೆ.2013ರಿಂದೀಚೆಗೆ ಇಂತಹ ಶಿಬಿರಗಳು ನಡೆಯದೆ ಹಲವು ಸಂತ್ರಸ್ತರು ಪರಿಹಾರ ಪಡೆಯಲು ವಿಫಲರಾಗಿದ್ದಾರೆ. ಇದು ಸಮಸ್ಯೆ ಪುನಃ ಕಠಿಣಗೊಳಿಸಬಹುದು ಮತ್ತು ಸಂತ್ರಸ್ತರಲ್ಲಿ ಅಸಂತೃಪ್ತಿ ಹೆಚ್ಚಲು ಕಾರಣವಾಗಬಹುದು ಎಂದು ಮಕ್ಕಳ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.