ಒಂದೇ ವರ್ಷದಲ್ಲಿ 13 ಹೊಸ ದಾಖಲೆಗಳ ಒಡತಿಯಾದಳು ಕಾನ್ಪುರದ ‘ಕ್ಯಾಲ್ಕುಲೇಟರ್ ಗರ್ಲ್ ’

Update: 2017-04-17 09:22 GMT

ಕಾನ್ಪುರ,ಎ.17: ನಗರದ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಕೇವಲ ಒಂದು ವರ್ಷದಲ್ಲಿ ಹಳೆಯ ದಾಖಲೆಗಳನ್ನೆಲ್ಲ ನುಚ್ಚುನೂರು ಮಾಡಿ 13 ಹೊಸ ಲಿಮ್ಕಾ ಬುಕ್ ದಾಖಲೆಗಳನ್ನು ಸ್ಥಾಪಿಸಿದ್ದಾಳೆ.

 ‘ಕ್ಯಾಲ್ಕುಲೇಟರ್ ಗರ್ಲ್ ’ಎಂದೇ ಜನಪ್ರಿಯಳಾಗಿರುವ ದಿಲ್‌ಪ್ರೀತ್ ಕೌರ್ ಒಂದು ನಿಮಿಷದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಗಣಿತ ಲೆಕ್ಕಾಚಾರಗಳನ್ನು ಮಾಡುವ ಮೂಲಕ 11 ರಾಷ್ಟ್ರೀಯ ಮತ್ತು 2 ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದಾಳೆ, ಅದೂ ಕೇವಲ ಒಂದು ವರ್ಷದಲ್ಲಿ! ತನ್ನ ಈ ಸಾಧನೆಗಾಗಿ ಶನಿವಾರ ಅವಳು ಪ್ರಮಾಣಪತ್ರಗಳನ್ನು ಸ್ವೀಕರಿಸಿದ್ದಾಳೆ.

2016,ಆ.25ರಂದು ಜಿಲ್ಲಾಡಳಿತ ಮತ್ತು ಭಾರತೀಯ ರೈಲ್ವೆ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 15.38 ಸೆಕಂಡ್‌ನಿಂದ 1.36 ನಿಮಿಷದವರೆಗಿನ ದಾಖಲೆ ಸಮಯದಲ್ಲಿ 11 ಗಣಿತ ಲೆಕ್ಕಾಚಾರಗಳನ್ನು ಮಾಡಿ 11 ದಾಖಲೆಗಳನ್ನು ಸೃಷ್ಟಿಸಿದ್ದಳು. ದಿಲ್‌ಪ್ರೀತ್‌ಳ ಈ ಎಲ್ಲ ದಾಖಲೆಗಳಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾನ್ಯತೆ ದೊರಕಿದೆ.

ಈವರೆಗೆ ದಿಲ್‌ಪ್ರೀತ್ ಎರಡು ವಿಶ್ವದಾಖಲೆಗಳು ಸೇರಿದಂತೆ 14 ದಾಖಲೆಗಳ ಒಡತಿಯಾಗಿದ್ದಾಳೆ.

 ದಿಲ್‌ಪ್ರೀತ್ ಕೇವಲ ಒಂದು ವರ್ಷದ ಅವಧಿಯಲ್ಲಿ ಗರಿಷ್ಠ 13 ದಾಖಲೆಗಳನ್ನು ಸ್ಥಾಪಿಸಿರುವ ಮೊದಲ ವ್ಯಕ್ತಿಯಾಗಿದ್ದು, ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ಇತಿಹಾಸದಲ್ಲಿಯೇ ಅಪರೂಪದ ಸಾಧನೆಯಾಗಿದೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ತಂಡದ ಸದಸ್ಯ ಅನಂತ ಕಾಸಿಭಾಟ್ಲಾ ಪ್ರಶಂಸಿಸಿದರು.

ಗಣಿತ ಶಿಕ್ಷಕರಾಗಿರುವ ದಿಲ್‌ಪ್ರೀತ್‌ಳ ತಂದೆ ಮಂಜೀತ್ ಸಿಂಗ್ ಅವರು ಬಿಡಿಸಲು ಗಣಿತದ ದೊಡ್ಡ ಲೆಕ್ಕಗಳನ್ನು ನೀಡುವ ಮೂಲಕ ಮಗಳನ್ನು ಪ್ರೋತ್ಸಾಹಿಸಿದ್ದಾರೆ. ತನ್ನ ಕೌಶಲವನ್ನು ಹೆಚ್ಚಿಸಿಕೊಳ್ಳಲು ಗುಣಾಕಾರ,ಭಾಗಾಕಾರ,ಸಂಕಲನ,ವ್ಯವಕಲನ,ವರ್ಗಮೂಲ ಮತ್ತು ಘನಮೂಲಗಳಂತಹ ಗಣಿತ ಪ್ರಕ್ರಿಯೆಗಳಿಗೆ ಪ್ರಾಚೀನ ಅಬಾಕಸ್ ಥಿಯರಿಯನ್ನು ಅನುಸರಿಸುವಂತೆ ನಾವು ಮಗಳಿಗೆ ಸೂಚಿಸಿದ್ದೆವು ಎಂದು ಸಿಂಗ್ ನುಡಿದರು. ಅವರ ಪತ್ನಿ ಸಿಮ್ರನ್ ಕೌರ್ ಕೂಡ ಶಿಕ್ಷಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News