ಬಿಸಿಲ ತಾಪಕ್ಕೆ ಬಸವಳಿದಿದ್ದೀರಾ ? ಇಲ್ಲಿವೆ ಕೆಲ ಉಪಯುಕ್ತ ಟಿಪ್ಸ್

Update: 2017-04-17 10:32 GMT

ಬಿಸಿಲ ಪ್ರಕೋಪ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಜನರು ಬಸವಳಿದಿದ್ದಾರೆ. ದೇಶದಲ್ಲಿ ಅದೆಷ್ಟೋ ಮಂದಿ ಆಸ್ಪತ್ರೆಗೂ ದಾಖಲಾಗುತ್ತಿದ್ದಾರೆ. ಆಯಾಸ, ನಿತ್ರಾಣ ಕೂಡ ಕಾಡಲಾರಂಭಿಸುತ್ತಿದೆ. ಈ ಸೆಖೆಯ ವಾತಾವರಣದಲ್ಲಿ ದೇಹವನ್ನು ತಂಪಾಗಿಸಲು ಹಾಗೂ ಅನಾರೋಗ್ಯ ಕಾಡದಂತೆ ನಾವೇ ಸೂಕ್ತ ಕಾಳಜಿ ವಹಿಸಬೇಕು. ಅದಕ್ಕೆ ಇಲ್ಲಿವೆ ಕೆಲವು ಟಿಪ್ಸ್...

ವಿಟಮಿನ್ 'ಸಿ'ಯುಕ್ತ ಆಹಾರ ಸೇವಿಸಿ: ಇದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಹವಾಮಾನ ಸಂಬಂಧಿತ ಅನಾರೋಗ್ಯಗಳಿಂದಲೂ ನೀವು ದೂರವಿರಬಹುದು.

ಸ್ವಚ್ಛತೆ ಕಾಪಾಡಿ : ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ. ಎಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಿ.

ಸಾಕಷ್ಟು ನೀರು, ನೈಸರ್ಗಿಕ ಪಾನೀಯ ಸೇವಿಸಿ: ಬಾಯಾರಿಕೆ ಆಗುವ ತನಕ ಕಾಯದೆ ಆಗಾಗ ಸ್ವಲ್ಪ ನೀರು ಸೇವಿಸುತ್ತಾ ಇರಿ. ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ, ಸೀಯಾಳ ನೀರು ಸೇವಿಸಿ.

ಮದ್ಯ ಮತ್ತು ಕೆಫೀನ್ ನಿಂದ ದೂರವಿರಿ: ಮದ್ಯ ಮತ್ತು ಕೆಫೀನ್ ಯುಕ್ತ ಆಹಾರ ದೇಹದಲ್ಲಿ ನೀರಿನಂಶ ಸೋರಿ ಹೋಗುವಂತೆ ಮಾಡುತ್ತದೆ. ಆದುದರಿಂದ ಸೆಖೆಗಾಲದಲ್ಲಿ ಅವುಗಳಿಂದ ದೂರವಿರಿ.

ಸ್ವಲ್ಪ ಊಟ ಮಾಡಿ: ಒಮ್ಮೆಲೇ ಗಡದ್ದಾಗಿ ಊಟ ಮಾಡಿ ದೇಹದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೊಟೀನ್ ತುಂಬಿಸಿದ್ದೀರೆಂದಾದರೆ ನಿಮ್ಮ ದೇಹದ ಉಷ್ಣಾಂಶವನ್ನೂ ಅದು ಹೆಚ್ಚಿಸುತ್ತದೆ. ಆದುದರಿಂದ ಲಘು ಊಟ ಮಾಡಿ ಹಾಗೂ ಒಂದು ಲೋಟ ಮಜ್ಜಿಗೆ ಕುಡಿದು ದೇಹ ತಂಪಾಗಿಸಿ.

ಶಾಖ ಹೆಚ್ಚಿಸುವ ಉಪಕರಣಗಳನ್ನು ಸ್ವಿಚ್ ಆಫ್ ಮಾಡಿ: ಲುಮಿನಸ್ ದೀಪಗಳು ಹೆಚ್ಚು ಶಾಖ ಉತ್ಪಾದಿಸುತ್ತವೆ. ಅಂತೆಯೇ ದಿನವಿಡೀ ಚಾಲೂ ಇರುವ ಕಂಪ್ಯೂಟರ್ ಮತ್ತಿತರ ಉಪಕರಣಗಳು.

ಮಕ್ಕಳ ವಿಚಾರದಲ್ಲಿ ಸಲಹೆಗಳು: ಮಕ್ಕಳು ಹೆಚ್ಚು ಹೊತ್ತು ಬಿಸಿಲಿಗೆ ಅಡ್ಡಾಡದಂತೆ ನೋಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಆಟವಾಡಲು ಕಳುಹಿಸಬೇಡಿ. ಆಟದ ಮೊದಲು ಏನಾದರೂ ತಿಂದು ಪಾನೀಯ ಸೇವಿಸಲಿ. ಸೆಖೆಯ ಸಮಯದಲ್ಲಿ ಮಕ್ಕಳು ಒಳಾಂಗಣ ಆಟ ಆಡಲು ಉತ್ತೇಜಿಸಿ. ಆದಷ್ಟು ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನೇ ಮಕ್ಕಳಿಗೆ ನೀಡಿ.

ಹಣ್ಣಿನ ಜ್ಯೂಸ್, ಸಲಾಡ್ ಸೇವಿಸಿ: ವೃದ್ಧರು ಈ ಸಮಯದಲ್ಲಿ ಹೆಚ್ಚು ಆಯಾಸ ಅನುಭವಿಸುತ್ತಾರೆ. ಅವರಿಗೆ ಆಗಾಗ ಹಣ್ಣಿನ ಜ್ಯೂಸ್ ಹಾಗೂ ನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ ನೀಡಿ. ಹತ್ತಿ ಬಟ್ಟೆಯನ್ನೇ ಧರಿಸುವಂತೆ ನೋಡಿಕೊಳ್ಳಿ.

ಶಿಶುಗಳ ಆರೋಗ್ಯ: ಬೇಸಿಗೆ ಸಮಯದಲ್ಲಿ ಶಿಶುಗಳ ಆರೋಗ್ಯದ ಬಗ್ಗೆಯೂ ಅತೀವ ಕಾಳಜಿ ಅಗತ್ಯವಾಗಿದೆ. ಆರು ತಿಂಗಳಿಗೂ ಕಡಿಮೆ ವಯಸ್ಸಿನ ಶಿಶುಗಳಿಗೆ ಆಗಾಗ ಮೊಲೆ ಹಾಲೂಡಿಸಿ ಅವುಗಳ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳಬೇಕು. ತಾಯಿಯೂ ಸಾಕಷ್ಟು ನೀರು ಸೇವಿಸಬೇಕು. ಶಿಶುಗಳ ಬಟ್ಟೆ ಸಡಿಲವಾಗಿರುವಂತೆ ನೋಡಿಕೊಳ್ಳಬೇಕು. ಕಿಟಿಕಿಗಳನ್ನು ತೆರೆದಿಟ್ಟು ಶುದ್ಧ ಗಾಳಿ ಮನೆಯೊಳಗೆ ಬೀಸುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News