×
Ad

ಸುವರ್ಣ ಯುಗ ಬಿಜೆಪಿಗೆ ಮಾತ್ರ, ದೇಶಕ್ಕಲ್ಲ: ಬಿಜೆಪಿಗೆ ಶಿವಸೇನೆ ಇದಿರೇಟು

Update: 2017-04-17 18:31 IST

ಮುಂಬೈ, ಎ.17: ಬಿಜೆಪಿಗೆ ಸುವರ್ಣ ಯುಗ ಇದಾಗಿರಬಹುದು. ಆದರೆ ಅಧಿಕಾರ ಮತ್ತು ರಾಜಕೀಯ ಗೆಲುವನ್ನು ಸುವರ್ಣ ಯುಗದತ್ತ ದಾಪುಗಾಲು ಎಂದು ಖಂಡಿತಾ ಹೇಳಲಾಗದು ಎಂದು ಶಿವಸೇನೆ ಇದಿರೇಟು ನೀಡಿದೆ.

ಭುವನೇಶ್ವರದಲ್ಲಿ ಶನಿವಾರ ಆರಂಭಗೊಂಡ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಪಕ್ಷದ ಅಧ್ಯಕ್ಷ ಅಮಿತ್ ಮಿಶ್ರಾ, ಬಿಜೆಪಿ ತನ್ನ ಉತ್ತುಂಗಕ್ಕೆ ಇನ್ನಷ್ಟೇ ಏರಬೇಕಿದೆ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಪಕ್ಷದ ಆಡಳಿತ ಇರುವ ಕಾಲ ಬಂದರೆ ಅದೇ ಸುವರ್ಣ ಯುಗ ಎಂದು ಹೇಳಿದ್ದರು.

ಶಿವಸೇನೆ, ಅಕಾಲಿದಳ, ಟಿಡಿಪಿಯಂತಹ ಮಿತ್ರಪಕ್ಷಗಳು ತಮ್ಮ ತಮ್ಮ ರಾಜ್ಯದಲ್ಲಿ ಬಲಿಷ್ಟವಾಗಿವೆ. ಈ ಪಕ್ಷಗಳ ಜೊತೆಗಿನ ಮೈತ್ರಿ ಅಗತ್ಯವಿದೆಯೇ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕಾಗಿದೆ ಎಂದು ಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಹೇಳಲಾಗಿದೆ.

 ಜಮ್ಮು-ಕಾಶ್ಮೀರದಲ್ಲಿ ಹಿಂಸೆ ಅವಿರತವಾಗಿ ಮುಂದುವರಿದಿದೆ. ಕುಲ್‌ಭೂಷಣ್ ಯಾದವ್ ಕುರಿತ ನಿಲುವನ್ನು ಪಾಕಿಸ್ತಾನ ಬಿಗಿಗೊಳಿಸಿದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ರೈತರು ಸಾಮೂಹಿಕ ಆತ್ಮಹತ್ಯೆಗೆ ಸಿದ್ಧವಾಗಿದ್ದಾರೆ. ಹಣದುಬ್ಬರದ ಪ್ರಮಾಣ ಕಡಿಮೆಯಾಗಿಲ್ಲ ಮತ್ತು ಉದ್ಯೋಗದ ಅವಕಾಶ ಹೆಚ್ಚಾಗಿಲ್ಲ. ದೇಶಕ್ಕೆ ಸುವರ್ಣ ಯುಗ ಇನ್ನೂ ಆರಂಭವಾಗಿಲ್ಲ ಎಂದು ಸೇನೆ ತಿಳಿಸಿದೆ.

    ತನ್ನೊಂದಿಗಿನ ಮೈತ್ರಿ ಬಿಜೆಪಿಗೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ‘ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ’ ಎಂಬ ಧ್ಯೇಯವಾಕ್ಯದ ಬಿಜೆಪಿ ರ್ಯಾಲಿಯನ್ನು ಉಲ್ಲೇಖಿಸಿದ ಶಿವಸೇನೆ, ಎಲ್ಲಾ ರಾಜ್ಯದಲ್ಲೂ ಬಿಜೆಪಿಯ ಆಡಳಿತ ಎಂಬ ಧ್ಯೇಯ ಒಳ್ಳೆಯದೇ. ಆದರೆ ಕೇವಲ ಅಧಿಕಾರ ಮತ್ತು ರಾಜಕೀಯ ಗೆಲುವನ್ನು ಸುವರ್ಣಯುಗದತ್ತ ಮುನ್ನಡೆ ಎಂದು ವ್ಯಾಖ್ಯಾನಿಸಲಾಗದು ಎಂದು ಹೇಳಿದೆ.

  ತನ್ನ ಧ್ಯೇಯ ಸಾಧನೆಯ ಮಾರ್ಗದಲ್ಲಿ ಬಿಜೆಪಿ ಮುಂದುವರಿಯಲಿ. ಆದರೆ ತನ್ನ ವಿರುದ್ಧ ಮಾತನಾಡುವವರು ದೇಶ ವಿರೋಧಿಗಳು ಎಂಬ ಧೋರಣೆ ಮಾತ್ರ ಸರಿಯಲ್ಲ. ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳಿಗೂ ಅಭಿವೃದಧಿ ಹೊಂದುವ ಹಕ್ಕು ಇದೆ. ಆದರೆ ವಿರೋಧ ಪಕ್ಷಗಳಿಗೂ ಶಕ್ತಿ ತುಂಬುವ ಮೂಲಕ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದುವರಿಯುವಂತೆ ಮಾಡುವುದು ಆಡಳಿತ ಪಕ್ಷದ ಜವಾಬ್ದಾರಿಯಾಗಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News