‘ಟೈಮ್’ ಸಮೀಕ್ಷೆಯಲ್ಲಿ ಡುಟರ್ಟ್ ಮುಂದು, ಪ್ರಧಾನಿ ಮೋದಿಗೆ ಎಷ್ಟು ಶೇ. ಮತ ಗೊತ್ತೇ ?
ವಾಶಿಂಗ್ಟನ್, ಎ. 17: 2017ರ ‘ಟೈಮ್ ವರ್ಷದ 100 ಅತ್ಯಂತ ಪ್ರಭಾವಿಗಳು’ ಸ್ಪರ್ಧೆಯ ಓದುಗರ ಸಮೀಕ್ಷೆಯಲ್ಲಿ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಓದುಗರ ಸಮೀಕ್ಷೆಯಲ್ಲಿ ಅವರು 5 ಶೇಕಡ ಮತಗಳನ್ನು ಪಡೆದಿದ್ದಾರೆ.
ಜಗತ್ತಿನ ಅತ್ಯಂತ 100 ಪ್ರಭಾವಿಗಳ ಪಟ್ಟಿಯಲ್ಲಿ ಯಾರೆಲ್ಲ ಅರ್ಹತೆ ಗಳಿಸಬೇಕು ಎಂಬ ಪ್ರಶ್ನೆಯನ್ನು ‘ಟೈಮ್’ ಪತ್ರಿಕೆ ತನ್ನ ಓದುಗರಿಗೆ ಕೇಳುತ್ತದೆ.
ಇನ್ನು ಅಂತಿಮ 100 ಪ್ರಭಾವಿಗಳ ಪಟ್ಟಿಯನ್ನು ಪತ್ರಿಕೆಯ ಸಂಪಾದಕರು ನಿರ್ಧರಿಸುತ್ತಾರೆ ಹಾಗೂ ಪಟ್ಟಿಯನ್ನು ಎಪ್ರಿಲ್ 20ರಂದು ಪ್ರಕಟಿಸಲಾಗುವುದು.
ಓದುಗರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪರವಾಗಿ ಸಾಕಷ್ಟು ಮತಗಳು ಬಿದ್ದಿಲ್ಲ ಎನ್ನಲಾಗಿದೆ. ಅವರ ಪರವಾಗಿ ಚಲಾವಣೆಯಾದ ಮತ ಶೂನ್ಯ ಶೇಕಡ ಎಂಬುದಾಗಿ ತೋರಿಸಲಾಗಿದೆ.
ಶೂನ್ಯ ಶೇಕಡ ಮತ ಸಂಪಾದಿಸಿದ ಇತರ ಗಣ್ಯರ ಪಟ್ಟಿಯಲ್ಲಿ ರ್ಯಾಪ್ ಹಾಡುಗಾರ ಕಾನ್ಯೆ ವೆಸ್ಟ್, ಜೆನಿಫರ್ ಲೊಪೆಝ್, ಇವಾಂಕಾ ಟ್ರಂಪ್ ಮತ್ತು ಸಿರಿಯ ಅಧ್ಯಕ್ಷ ಬಶರ್ ಅಲ್-ಅಸದ್.
ಡುಟರ್ಟ್‌ರ ನಂತರದ ಸ್ಥಾನಗಳಲ್ಲಿ ತಲಾ ಮೂರು ಶೇಕಡ ಮತಗಳನ್ನು ಪಡೆದ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ, ಪೋಪ್ ಫ್ರಾನ್ಸಿಸ್, ಮೈಕ್ರೊಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಮತ್ತು ಫೇಸ್‌ಬುಕ್ ಸಹಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮುಂತಾದವರಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2 ಶೇಕಡ ಮತಗಳನ್ನು ಪಡೆದಿದ್ದಾರೆ. ಎರಡು ಶೇಕಡ ಮತಗಳನ್ನು ಪಡೆದ ಇತರರಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಗಾಯಕಿ ರಿಹಾನಾ ಮತ್ತು ನಟಿ ಎಮ್ಮಾ ಸ್ಟೋನ್ ಸೇರಿದ್ದಾರೆ.
2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಬರ್ನೀ ಸ್ಯಾಂಡರ್ಸ್ ಮತದಾರರ ಆಯ್ಕೆಯಾಗಿದ್ದರು.