ಆಸ್ಟ್ರೇಲಿಯ: ವಿಶೇಷ ಉದ್ಯೋಗ ವೀಸಾ ಯೋಜನೆ ರದ್ದು

Update: 2017-04-18 11:52 GMT

ಮೆಲ್ಬರ್ನ್, ಎ. 18: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿರುವ ಆಸ್ಟ್ರೇಲಿಯ, 95,000ಕ್ಕೂ ಅಧಿಕ ವಿದೇಶಿ ಹಂಗಾಮಿ ನೌಕರರು ಉಪಯೋಗಿಸುತ್ತಿರುವ ವೀಸಾ ಯೋಜನೆಯೊಂದನ್ನು ಇಂದು ರದ್ದುಪಡಿಸಿದೆ.

‘457 ವೀಸಾ’ ಎಂಬ ಹೆಸರಿನ ಈ ಯೋಜನೆಯ ಗರಿಷ್ಠ ಫಲಾನುಭವಿಗಳು ಭಾರತೀಯರಾಗಿದ್ದಾರೆ.

ಈ ವೀಸಾ ಯೋಜನೆಯು ಕೌಶಲಭರಿತ ಹುದ್ದೆಗಳಿಗೆ ವಿದೇಶಿ ನೌಕರರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಲು ಉದ್ಯಮಗಳಿಗೆ ಅವಕಾಶ ನೀಡುತ್ತದೆ.
‘‘ನಮ್ಮದು ವಲಸಿಗರ ದೇಶವೇ ಹೌದು. ಆದರೆ, ಆಸ್ಟ್ರೇಲಿಯದ ಉದಯಗೋಗಗಳಲ್ಲಿ ಆಸ್ಟ್ರೇಲಿಯನ್ನರಿಗೆ ಆದ್ಯತೆ ಇರಬೇಕೆನ್ನುವುದೂ ಸರಿ. ಹಾಗಾಗಿ, ನಮ್ಮ ದೇಶಕ್ಕೆ ಹಂಗಾಮಿ ವಿದೇಶಿ ಉದ್ಯೋಗಿಗಳನ್ನು ತರುವ ‘457 ವೀಸಾ’ ಯೋಜನೆಯನ್ನು ರದ್ದುಪಡಿಸುತ್ತಿದ್ದೇವೆ’’ ಎಂದು ಆಸ್ಟ್ರೇಲಿಯ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಹೇಳಿದರು.

ಭಾರತವನ್ನು ಹೊರತುಪಡಿಸಿ, ಈ ವೀಸಾ ಯೋಜನೆಯ ಇತರ ಪ್ರಮುಖ ಫಲಾನುಭವಿಗಳೆಂದರೆ ಬ್ರಿಟನ್ ಮತ್ತು ಚೀನಾ.
ಕೌಶಲಭರಿತ ಹುದ್ದೆಗಳಿಗೆ ಸಂಬಂಧಿಸಿ ‘ಆಸ್ಟ್ರೇಲಿಯಕ್ಕೆ ಆದ್ಯತೆ’ ಎಂಬ ನೀತಿಯನ್ನು ಆಸ್ಟ್ರೇಲಿಯ ರೂಪಿಸಲಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷದ ಸೆಪ್ಟಂಬರ್ 30ರ ವೇಳೆಗೆ, ‘457 ವೀಸಾ’ ಯೋಜನೆಯಡಿಯಲ್ಲಿ, ಆಸ್ಟ್ರೇಲಿಯದಲ್ಲಿ 95,757 ವಿದೇಶೀಯರು ಕೆಲಸ ಮಾಡುತ್ತಿದ್ದರು ಎಂದು ಎಬಿಸಿ ವರದಿ ಮಾಡಿದೆ.

ಈ ವೀಸಾ ಯೋಜನೆಯ ಸ್ಥಾನದಲ್ಲಿ ನಿರ್ಬಂಧಗಳಿರುವ ಇನ್ನೊಂದು ವೀಸಾ ಯೋಜನೆಯನ್ನು ಜಾರಿಗೆ ತರಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News