ಶಶಿಕಲಾ ಕುಟುಂಬವನ್ನು ಹೊರಗಿಡುವ ತನಕ ವಿಲೀನ ಮಾತುಕತೆ ಇಲ್ಲ: ಸೆಲ್ವಂ
ಚೆನ್ನೈ, ಎ.18: ವಿ.ಕೆ.ಶಶಿಕಲಾ ಮತ್ತು ಕುಟುಂಬವನ್ನು ರಾಜಕೀಯದಿಂದ ದೂರವಿಡುವ ತನಕ ಎಐಎಡಿಎಂಕೆ(ಅಮ್ಮಾ) ಮತ್ತು ಎಐಎಡಿಎಂಕೆ (ಪುರುಚಿ ತಲೈವಿ ಅಮ್ಮಾ) ಬಣಗಳ ವಿಲೀನ ಮಾತುಕತೆ ಇಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ಸ್ಪಷ್ಟಪಡಿಸಿದ್ದಾರೆ.
ಪೆರಿಯಾಕುಲಂನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಮೂಲ ಸಿದ್ಧಾಂತವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು ಕುಟುಂಬ ರಾಜಕಾರಣಕ್ಕೆ ಎಐಎಡಿಎಂಕೆಯಲ್ಲಿ ಅವಕಾಶ ಇಲ್ಲ. ಇದರಲ್ಲಿ ಏನಾದರೂ ಬದಲಾವಣೆ ಮಾಡಿದರೆ ಪಕ್ಷವನ್ನು ಕಟ್ಟಿದ ನಾಯಕರಿಗೆ ಅಗೌರವ ಮತ್ತು ತಮಿಳುನಾಡಿನ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
" ಎಐಎಡಿಎಂಕೆ ಯಾರ ಕುಟುಂಬದ ಕೈಯಲ್ಲೂ ಇರಲಿಲ್ಲ. ಅಮ್ಮಾ(ಜಯಲಲಿತಾ) ಕುಟುಂಬವನ್ನು ಪಕ್ಷದಿಂದ ದೂರ ಇಟ್ಟಿದ್ದರು. ಶಶಿಕಲಾ ಅವರಿಗೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಆ ಹಿನ್ನೆಲೆಯಲ್ಲಿ ನಮ್ಮ ನಿಲುವಿನಲ್ಲೂ ಯಾವುದೇ ಬದಲಾವಣೆ ಇಲ್ಲ” ಎಂದು ಸೆಲ್ವಂ ಹೇಳಿದರು.
ಜಯಲಲಿತಾ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಸೆಲ್ವಂ ಆಗ್ರಹಿಸಿದರು.
ಎಐಎಡಿಎಂಕೆ(ಅಮ್ಮಾ) ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಆರ್ ಕೆ ನಗರ ಉಪ ಚುನಾವಣೆಗೆ ಸಂಬಂಧಿಸಿ ಮತದಾರರಿಗೆ ಹಣ ನೀಡಿದ್ದಾರೆ ಮತ್ತು ಪಕ್ಷದ ಚಿನ್ಹೆ "ಎರಡು ಎಲೆ’ಯನ್ನು ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಚುನಾವಣಾ ಆಯೋಗಕ್ಕೆ ಪ್ರಭಾವ ಬೀರಲು ಅಧಿಕಾರಿಗಳಿಗೆ 50 ಕೋಟಿ ರೂ. ಲಂಚ ನೀಡಲು ಯತ್ನಿಸಿದ್ದಾರೆ ಎಂದು ಓಪಿಎಸ್ ಆರೋಪಿಸಿದರು.