ಈ ವರ್ಷ ಸಾಮಾನ್ಯ ಮಳೆಯಾಗುವ ನಿರೀಕ್ಷೆ
ಮುಂಬೈ,ಎ.18: ಭಾರತದ ಪಾಲಿಗೆ ಮಹತ್ವದ್ದಾಗಿರುವ ಮುಂಗಾರು ಮಳೆ ಈ ವರ್ಷ ಸಾಮಾನ್ಯ ಪ್ರಮಾಣದಲ್ಲಿ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಕೆ.ಜೆ.ರಮೇಶ್ ಅವರು ಮಂಗಳವಾರ ತಿಳಿಸಿದ್ದು, ಇದು ಕೃಷಿ ಮತ್ತು ಆರ್ಥಿಕ ಬೆಳವಣಿಗೆ ಕುರಿತ ಕಳವಳಗಳನ್ನು ಹಗುರಗೊಳಿಸಿದೆ.
ದೀರ್ಘಾವಧಿ ಸರಾಸರಿ (ಎಲ್‌ಪಿಎ)ಯ ಶೇ.96ರಷ್ಟು ಮುಂಗಾರು ಮಳೆಯಾಗಲಿದೆ ಮತ್ತು ದೇಶದ ಎಲ್ಲ ಭಾಗಗಳಿಗೂ ಹರಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ರಮೇಶ್, ಮುಂಗಾರಿನ ಆರಂಭದ ಅವಧಿಯಲ್ಲಿ ದುರ್ಬಲ ಎಲ್ ನಿನೊ ಬಿತ್ತನೆ ಕಾರ್ಯಗಳಿಗೆ ಸಹಕರಿಸಲಿದೆ. ಆದರೆ ಉತ್ತಮ ಇಳುವರಿಗೆ ಋತುವಿನ ಉತ್ತರಾರ್ಧದಲ್ಲಿ ಸಾಕಷ್ಟು ಉತ್ತಮ ಮಳೆಯಾಗುವುದು ಮುಖ್ಯವಾಗಿದೆ ಎಂದರು.
ಎಲ್‌ಪಿಎದ ಶೇ.96ರಿಂದ ಶೇ.104ರ ನಡುವೆ ಮಳೆಯಾದರೆ ಅದನ್ನು ಸಾಮಾನ್ಯ ಮಳೆಯೆಂದು, ಶೇ.96ಕ್ಕಿಂತ ಕಡಿಮೆಯಾದರೆ ಸಾಮಾನ್ಯಕ್ಕಿಂತ ಕಡಿಮೆ ಎಂದು ಹಾಗೂ ಶೆ.104ರಿಂದ ಶೇ.110ರವರೆಗೆ ಮಳೆ ಬಿದ್ದರೆ ಅದನ್ನು ಸಾಮಾನ್ಯಕ್ಕಿಂತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಹೆಚ್ಚಿದ್ದರೂ, ಮುಂಗಾರು ಮಳೆಯಲ್ಲಿ ಮಹತ್ವದ ಕೊರತೆಯೇನಾದರೂ ಎದುರಾದರೆ ಬೆಳೆಗಳ ರಕ್ಷಣೆಗೆ ಅದು ಸಾಲದಾಗಬಹುದು ಎನ್ನುವುದು ಇಲಾಖೆಯ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.
ಒಟ್ಟರೆ ಜಿಡಿಪಿಗೆ ಕೃಷಿಯ ಕೊಡುಗೆಯು ಸಾಮಾನ್ಯವಾಗಿದ್ದರೂ, ಮುಂಗಾರು ಮುನ್ನೋಟವು ಕೃಷಿ ಪೂರಕ ಸಾಮಗ್ರಿಗಳು, ಬೈಕ್‌ಗಳು ಮತು ಟ್ರಾಕ್ಟರ್ ಇತ್ಯಾದಿ ಗಳು ಸೇರಿದಂತೆ ಬಳಕೆದಾರ ಕ್ಷೇತ್ರದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದರು.
ಕಳೆದ ವರ್ಷ ಹವಾಮಾನ ಇಲಾಖೆಯು ಆರಂಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿತ್ತಾದರೂ ಬಳಿಕ ಅದನ್ನು ಸಾಮಾನ್ಯಕ್ಕೆ ಪರಿಷ್ಕರಿಸಿತ್ತು. ದಕ್ಷಿಣ ಭಾರತದಲ್ಲಿ ಮಳೆಯ ಕೊರತೆಯುಂಟಾಗಿದ್ದು, ತಮಿಳುನಾಡು, ಕರ್ನಾಟಕ ಮತ್ತು ಕೇರಳ ಬರದ ದವಡೆಯಲ್ಲಿ ಸಿಲುಕಿದ್ದವು.