ದಂಗೆ ಪ್ರಕರಣದಲ್ಲಿ ಪನ್ನೀರ್ ಪುತ್ರ,ಸೋದರನಿಗೆ ನಿರೀಕ್ಷಣಾ ಜಾಮೀನು
Update: 2017-04-18 18:37 IST
ಚೆನ್ನೈ,ಎ.18: ಆರ್‌ಕೆ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ದಂಗೆ ಪ್ರಕರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರ ಪುತ್ರ ಒ.ಪಿ ರವೀಂದ್ರನಾಥ ಕುಮಾರ್ ಮತ್ತು ಪನ್ನೀರ್ ಸೋದರ ಒ.ರಾಜಾ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಗತ್ಯವಿದ್ದಾಗ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆೆ ಹಾಜರಾಗುವಂತೆ ನ್ಯಾ.ಎಸ್ ಭಾಸ್ಕರನ್ ಅವರು ಉಭಯತರಿಗೆ ನಿರ್ದೇಶ ನೀಡಿದರು.
ಕುಮಾರ್ ಮತ್ತು ರಾಜಾ ಅವರು ಇತರ ಕೆಲವರೊಂದಿಗೆ ಸೇರಿ ಎ.6ರಂದು ಆರ್.ಕೆ.ನಗರದಲ್ಲಿ ಎದುರಾಳಿ ಏಐಎಡಿಎಂಕೆ (ಅಮ್ಮಾ) ಬಣದ ಕಾರ್ಯಕರ್ತನ ಮೇಲೆ ದಾಳಿ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಎ.12ರಂದು ನಡೆಯಬೇಕಾಗಿದ್ದ ಈ ಉಪಚುನಾವಣೆಯನ್ನು ಮತದಾರರ ಮೇಲೆ ಪ್ರಭಾವ ಬೀರಲು ಹಣದ ಬಳಕೆಯಾಗಿದೆ ಎಂಬ ದೂರುಗಳ ಮೇರೆಗೆ ಚುನಾವಣಾ ಆಯೋಗವು ರದ್ದುಗೊಳಿಸಿದೆ.