ಅಮೆರಿಕದಲ್ಲಿ ಸಿಖ್ ಚಾಲಕನಿಗೆ ಪ್ರಯಾಣಿಕರಿಂದ ಹಲ್ಲೆ
ನ್ಯೂಯಾರ್ಕ್, ಎ. 18: ಅಮೆರಿಕದಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿರುವ 25 ವರ್ಷದ ಸಿಖ್ ವ್ಯಕ್ತಿಯೊಬ್ಬರಿಗೆ ಅವರ ಕಾರಿನ ಪ್ರಯಾಣಿಕರು ಹಲ್ಲೆ ನಡೆಸಿ ಅವರ ಪೇಟಾವನ್ನು ಕಿತ್ತೆಸೆದ ಘಟನೆಯೊಂದು ವರದಿಯಾಗಿದೆ.
ಘಟನೆ ರವಿವಾರ ಬೆಳಗ್ಗೆ ನಡೆದಿದ್ದು, ಪಂಜಾಬ್‌ನಿಂದ ವಲಸೆ ಹೋಗಿರುವ ಹರ್‌ಕೀರತ್ ಸಿಂಗ್ ಭಯಭೀತರಾಗಿದ್ದಾರೆ.
‘‘ನಾನು ತುಂಬಾ ಹೆದರಿದ್ದೇನೆ. ನಾನಿಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ’’ ಎಂದು ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿರುವ ಸಿಂಗ್ ‘ನ್ಯೂಯಾರ್ಕ್ ಡೇಲಿ ನ್ಯೂಸ್’ಗೆ ಹೇಳಿದರು.
‘‘ಇದು ನನ್ನ ಧರ್ಮ ಮತ್ತು ನಂಬಿಕೆಗೆ ಮಾಡಿದ ಅವಮಾನವೂ ಹೌದು. ಅದೊಂದು ಭಯಾನಕ ಘಟನೆ’’ ಎಂದರು.ಈ ಘಟನೆಯನ್ನು ಸಂಭಾವ್ಯ ದ್ವೇಷ ಅಪರಾಧವನ್ನಾಗಿ ಪರಿಗಣಿಸಿ ನ್ಯೂಯಾರ್ಕ್ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಸಿಂಗ್ ತನ್ನ ಕಾರಿನಲ್ಲಿ ರವಿವಾರ ಬೆಳಗ್ಗೆ ಸುಮಾರು 5 ಗಂಟೆಗೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಿಂದ ಮೂವರು ಪುರುಷರು ಮತ್ತು ಓರ್ವ ಮಹಿಳೆಯನ್ನು ಹತ್ತಿಸಿಕೊಂಡಿದ್ದರು. ಬ್ರಾಂಕ್ಸ್‌ನಲ್ಲಿ ಪ್ರಯಾಣಿಕರು ತಲುಪಬೇಕಾದ ಸ್ಥಳಕ್ಕೆ ಕಾರು ಬಂದಾಗ, ತಮ್ಮನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ ಎಂಬುದಾಗಿ ಪ್ರಯಾಣಿಕರು ತಗಾದೆ ತೆಗೆದರು ಎನ್ನಲಾಗಿದೆ.
ಪ್ರಯಾಣಿಕರು ಕುಡಿದ ಮತ್ತಿನಲ್ಲಿದ್ದು, ಎಲ್ಲಿಗೆ ಹೋಗಬೇಕು ಎಂಬ ಸಿಂಗ್‌ರ ಪ್ರಶ್ನೆಗೆ ನೇರ ಉತ್ತರವನ್ನು ನೀಡಲಿಲ್ಲ. ಬಾಡಿಗೆ ಹಣ ನೀಡುವಂತೆ ಕೋರಿದಾಗ ಪ್ರಯಾಣಿಕರು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಸಿಂಗ್ ಆರೋಪಿಸಿದ್ದಾರೆ.
ಪೊಲೀಸರು ಬರುವ ಸೂಚನೆ ಲಭಿಸಿದಾಗ ದುಷ್ಕರ್ಮಿಗಳು ಸಿಂಗ್‌ರ ಪೇಟವನ್ನು ಕಿತ್ತುಕೊಂಡು ಪಲಾಯನಗೈದಿದ್ದಾರೆ.