ಟರ್ಕಿ : ತುರ್ತು ಪರಿಸ್ಥಿತಿ ಮತ್ತೆ 3 ತಿಂಗಳು ವಿಸ್ತರಣೆ

Update: 2017-04-18 14:23 GMT

ಅಂಕಾರ, ಎ. 18: ಟರ್ಕಿ ಬುಧವಾರದಿಂದ ಅನ್ವಯವಾಗುವಂತೆ ತುರ್ತು ಪರಿಸ್ಥಿತಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ ಎಂದು ಉಪ ಪ್ರಧಾನಿ ನೂಮನ್ ಕುರ್ತುಲ್‌ಮುಸ್ ಹೇಳಿದ್ದಾರೆ.

ಕಳೆದ ವರ್ಷದ ಜುಲೈಯಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ಯತ್ನ ನಡೆದ ಬಳಿಕ, ಇದು ತುರ್ತು ಪರಿಸ್ಥಿತಿಯ ಮೂರನೆ ವಿಸ್ತರಣೆಯಾಗಿದೆ.

ತುರ್ತು ಪರಿಸ್ಥಿತಿಯನ್ನು ವಿಸ್ತರಿಸುವಂತೆ ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದ ಸಲಹೆಯಂತೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಂಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಪ್ರಧಾನಿ ಹೇಳಿದರು.

ಜುಲೈ 15ರಂದು ನಡೆದ ವಿಫಲ ಕ್ಷಿಪ್ರಕ್ರಾಂತಿಯ ಬಳಿಕ ಮೊದಲ ಬಾರಿಗೆ ಟರ್ಕಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಬಳಿಕ ಅದನ್ನು ಅಕ್ಟೋಬರ್ ಮತ್ತು ಜನವರಿಗಳಲ್ಲಿ ವಿಸ್ತರಿಸಲಾಗಿತ್ತು.


ಟರ್ಕಿ ಸಮೀಕ್ಷೆಯಲ್ಲಿ ಅವ್ಯವಹಾರ : ವೀಕ್ಷಕರು

ಟರ್ಕಿಯಲ್ಲಿ ರವಿವಾರ ನಡೆದ ಜನಮತಗಣನೆಯಲ್ಲಿ 25 ಲಕ್ಷದವರೆಗಿನ ಮತಗಳಲ್ಲಿ ಹಸ್ತಕ್ಷೇಪ ನಡೆಸಿರುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ವೀಕ್ಷಕ ಸಂಸ್ಥೆ ‘ಕೌನ್ಸಿಲ್ ಆಫ್ ಯುರೋಪ್’ನ ಆಸ್ಟ್ರಿಯನ್ ಸದಸ್ಯ ಅಲೆವ್ ಕೊರುನ್ ಮಂಗಳವಾರ ‘ಒಆರ್‌ಎಫ್ ರೇಡಿಯೊ’ಗೆ ಹೇಳಿದ್ದಾರೆ.

ಅಧ್ಯಕ್ಷರಿಗೆ ಅಪರಿಮಿತ ಅಧಿಕಾರ ಕೊಡುವುದಕ್ಕೆ ಜನರ ಅಭಿಪ್ರಾಯವನ್ನು ಕೋರಿ ನಡೆಸಲಾದ ಜನಮತಗಣನೆಯಲ್ಲಿ, ಪ್ರಸ್ತಾಪದ ಪರವಾಗಿ ಕ್ಷೀಣ ಅಂತರದ ಅಭಿಪ್ರಾಯ ವ್ಯಕ್ತವಾಗಿತ್ತು.

ಜನಮತಗಣನೆಯು ಅಸಮಾನ ಸ್ಪರ್ಧೆಯಾಗಿತ್ತು ಎಂಬುದಾಗಿ 47 ಸದಸ್ಯರ ಕೌನ್ಸಿಲ್ ಆಫ್ ಯುರೋಪ್ ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News