ರಶ್ಯದ ಫಾರ್ ಈಸ್ಟ್‌ಗೆ ಭಾರತಕ್ಕೆ ವೀಸಾರಹಿತ ಭೇಟಿ ಅವಕಾಶ
ಕಮ್‌ಚಟ್ಕ (ರಶ್ಯ), ಎ. 18: ಭಾರತ ಮತ್ತು ಯುಎಇಯ ನಾಗರಿಕರು ವೀಸಾಗಳಿಲ್ಲದೆ ರಶ್ಯದ ದೂರದ ಪೂರ್ವ ಪ್ರದೇಶಗಳಿಗೆ (ಫಾರ್ ಈಸ್ಟ್) ಭೇಟಿ ನೀಡಬಹುದಾಗಿದೆ ಎಂದು ರಶ್ಯ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಘೋಷಿಸಿದ್ದಾರೆ.
18 ದೇಶಗಳ ಪ್ರವಾಸಿಗರು ಮತ್ತು ವ್ಯಾಪಾರಿಗಳು ರಶ್ಯದ ಫಾರ್ ಈಸ್ಟ್‌ಗೆ ವೀಸಾಗಳಿಲ್ಲದೆ ಪ್ರವೇಶಿಸುವ ಅರ್ಹತೆ ಹೊಂದಿದ್ದಾರೆ ಎಂದು ಮೆಡ್ವೆಡೆವ್ ಹೇಳಿರುವುದಾಗಿ ‘ಟಾಸ್’ ವರದಿ ಮಾಡಿದೆ.
ಈ 18ರ ಪಟ್ಟಿಯಲ್ಲಿರುವ ದೇಶಗಳೆಂದರೆ- ಭಾರತ, ಯುಎಇ, ಅಲ್ಜೀರಿಯ, ಬಹ್ರೇನ್, ಬ್ರೂನೆ, ಇರಾನ್, ಕತರ್, ಚೀನಾ, ಉತ್ತರ ಕೊರಿಯ, ಕುವೈತ್, ಮೊರೊಕ್ಕೊ, ಮೆಕ್ಸಿಕೊ, ಒಮನ್, ಸೌದಿ ಅರೇಬಿಯ, ಸಿಂಗಾಪುರ, ಟ್ಯುನೀಶಿಯ, ಟರ್ಕಿ ಮತ್ತು ಜಪಾನ್.
‘‘ಯಾವ ದೇಶಗಳ ಪ್ರಜೆಗಳು ವೀಸಾರಹಿತ ಪ್ರವಾಸದ ಸೌಲಭ್ಯ ಪಡೆಯಬಹುದು ಎಂಬ ಪಟ್ಟಿಗೆ ನಾನು ಇತ್ತೀಚೆಗೆ ಅನುಮೋದನೆ ನೀಡಿದ್ದೇನೆ. ವ್ಯಾಪಾರಿಗಳು ಮತ್ತು ಪ್ರವಾಸಿಗರು ರಶ್ಯದ ವೀಸಾಗಳನ್ನು ಪಡೆಯುವ ಸಾಂಪ್ರದಾಯಿಕ ಪ್ರಕ್ರಿಯೆಗೆ ಒಳಗಾಗಬೇಕಿಲ್ಲ’’ ಎಂದು ಪ್ರಧಾನಿ ಹೇಳಿದರು.
‘‘ವಿದೇಶಿ ಪ್ರವಾಸಿಗರು ತಮ್ಮ ವಿವರಗಳನ್ನು ವಿಶೇಷ ವೆಬ್‌ಸೈಟೊಂದರಲ್ಲಿ ದಾಖಲಿಸಿದರೆ ಸಾಕು’’ ಎಂದರು.