ವಿಕ್ಟೋರಿಯಾಗೆ ಶರಣಾದ ಭಾರತ
ಹೊಸದಿಲ್ಲಿ, ಎ.18: ಹದಿನೇಳು ವರ್ಷದೊಳಗಿನವರ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪೋರ್ಚುಗಲ್‌ನ ವಿಕ್ಟೋರಿಯಾ ಡೆ ಸೆಟುಬಾಲ್ ತಂಡದ ವಿರುದ್ಧ 1-2 ಗೋಲುಗಳ ಅಂತರದಿಂದ ಶರಣಾಗಿದೆ.
ಪೋರ್ಚುಗಲ್ ರಾಜಧಾನಿ ಲಿಸ್ಬನ್‌ನಲ್ಲಿ ಮಂಗಳವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಎದುರಾಳಿ ತಂಡಕ್ಕೆ ಸಮಬಲದ ಹೋರಾಟ ನೀಡಿದ್ದರೂ ಕೆಲವು ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿತು.
ವಿಕ್ಟೋರಿಯಾ ತಂಡ 16ನೆ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಸಾಧಿಸಿತು. ಮೊದಲಾರ್ಧ ಕೊನೆಗೊಂಡಾಗ ವಿಕ್ಟೋರಿಯಾ ತಂಡ 1-0 ಮುನ್ನಡೆ ಕಾಯ್ದುಕೊಂಡಿತ್ತು. 67ನೆ ನಿಮಿಷದಲ್ಲಿ ಗೋಲು ಬಾರಿಸಿದ ಅಂಕಿತ್ ಜಾಧವ್ ಭಾರತ ಸಮಬಲ ಸಾಧಿಸಲು ನೆರವಾದರು. ಭಾರತ ಮುನ್ನಡೆ ಸಾಧಿಸಲು ಯತ್ನಿಸಿತು. ಆದರೆ, 85ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದ ವಿಕ್ಟೋರಿಯಾ ತಂಡ 2-1 ಅಂತರದಿಂದ ಜಯಭೇರಿ ಬಾರಿಸಿತು.
ಭಾರತದ ಅಂಡರ್-17 ಫುಟ್ಬಾಲ್ ತಂಡ ಎ.25 ರಂದು ಪೋರ್ಚುಗಲ್‌ನ ಜಾಮೊರ್‌ನಲ್ಲಿ ನಡೆಯಲಿರುವ ಎರಡನೆ ಪಂದ್ಯದಲ್ಲಿ ಬೆಲೆನೆನ್ಸಸ್ ತಂಡವನ್ನು ಎದುರಿಸಲಿದೆ.