×
Ad

ಶಾಹಿದ್ ಅಫ್ರಿದಿಗೆ ಉಡುಗೊರೆ ನೀಡಿದ ಟೀಮ್ ಇಂಡಿಯಾ!

Update: 2017-04-18 23:16 IST

ಹೊಸದಿಲ್ಲಿ, ಎ.18: ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳು ಯಾವಾಗಲೂ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಉಭಯ ದೇಶಗಳ ಕ್ರಿಕೆಟಿಗರು ಮಾತ್ರ ಮೈದಾನದ ಹೊರಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಇತ್ತೀಚೆಗೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಪಾಕ್‌ನ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಸ್ಮರಣೀಯ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸಹಿ ಮಾಡಿರುವ ನಾಯಕ ವಿರಾಟ್ ಕೊಹ್ಲಿಯ ಜರ್ಸಿಯನ್ನು ಇತ್ತೀಚೆಗಷ್ಟೇ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಅಫ್ರಿದಿಗೆ ಕಳುಹಿಸಿಕೊಡಲಾಗಿದೆ. ಜರ್ಸಿಯಲ್ಲಿ ಕೊಹ್ಲಿಯ ಕೈಬರಹದ ಸಂದೇಶವೂ ಇದೆ. ‘‘ಶಾಹಿದ್ ಬಾಯ್, ನಿಮಗೆ ಶುಭವಾಗಲಿ, ನಿಮ್ಮ ವಿರುದ್ಧ ಆಡುವುದಕ್ಕೆ ನಮಗೆ ಯಾವಾಗಲೂ ಸಂತೋಷವಾಗುತ್ತಿತ್ತು’’ ಎಂದು ಕೊಹ್ಲಿ ಬರೆದಿದ್ದಾರೆ.

ಅಫ್ರಿದಿಗೆ ಕಳುಹಿಸಿಕೊಡಲಾಗಿರುವ ಶರ್ಟ್‌ನ ಇಮೇಜ್‌ನ್ನು ಪಾಕಿಸ್ತಾನದ ಪತ್ರಕರ್ತರು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಶರ್ಟ್‌ನಲ್ಲಿ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಆಶೀಷ್ ನೆಹ್ರಾ, ಜಸ್‌ಪ್ರಿತ್ ಬುಮ್ರಾ, ಸುರೇಶ್ ರೈನಾ, ಪವನ್ ನೇಗಿ, ಮುಹಮ್ಮದ್ ಶಮಿ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಅಜಿಂಕ್ಯ ರಹಾನೆ, ಶಿಖರ್ ಧವನ್, ಆರ್.ಅಶ್ವಿನ್, ಹಾರ್ದಿಕ್ ಪಾಂಡ್ಯ ಸಹಿಯಿದೆ.

ಅಫ್ರಿದಿ ಫೆಬ್ರವರಿಯಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಿಂದ ಬೇಗನೆ ನಿವೃತ್ತಿಯಾಗಿದ್ದ ಅಫ್ರಿದಿ 2016ರ ಟ್ವೆಂಟಿ-20 ವಿಶ್ವಕಪ್ ತನಕ ಪಾಕ್‌ಮ ಟ್ವೆಂಟಿ-20 ನಾಯಕನಾಗಿ ಮುಂದುವರಿದಿದ್ದರು. ಅಫ್ರಿದಿ 27 ಟೆಸ್ಟ್, 398 ಏಕದಿನ ಹಾಗೂ 98 ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News