ವರದಿಗಾರನಾದ ಭುವನೇಶ್ವರ ಕುಮಾರ್
ಹೈದರಾಬಾದ್, ಎ.18: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ವೇಳೆ ಐದು ವಿಕೆಟ್‌ಗಳ ಗೊಂಚಲು ಪಡೆದು ಸನ್‌ರೈಸರ್ಸ್ ಹೈದರಾಬಾದ್ ತಂಡ ರೋಚಕ ಗೆಲುವು ಸಾಧಿಸಲು ನೆರವಾಗಿದ್ದ ಮಧ್ಯಮ ವೇಗದ ಬೌಲರ್ ಭುವನೇಶ್ವರ ಕುಮಾರ್ ಪಂದ್ಯ ಕೊನೆಗೊಂಡ ಬಳಿಕ ವರದಿಗಾರನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್‌ನ್ನು ತನ್ನದಾಗಿಸಿಕೊಂಡಿರುವ ಭುವಿ ವರದಿಗಾರನ ಕರ್ತವ್ಯ ನಿರ್ವಹಿಸಿದರು. ಹೈದರಾಬಾದ್‌ನ ಸಹ ಆಟಗಾರರಾದ ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ ಅವರ ಸಂದರ್ಶನ ಪಡೆಯಲು ನಿರ್ಧರಿಸಿದರು.
ನಬಿ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ 28 ರನ್‌ಗೆ 1 ವಿಕೆಟ್ ಪಡೆದಿದ್ದರು. ಈಬಗ್ಗೆ ಭುವಿಯೊಂದಿಗೆ ಮಾತನಾಡಿದ ಅಫ್ಘಾನಿಸ್ತಾನದ ಮಾಜಿ ನಾಯಕ ನಬಿ,‘‘ಇದು ನನ್ನ ಮೊತ್ತ ಮೊದಲ ಐಪಿಎಲ್ ಪಂದ್ಯವಾಗಿದ್ದ ಕಾರಣ ನಾನು ತುಂಬಾ ಒತ್ತಡದಲ್ಲಿದ್ದೆ. ನಾನೆಸೆದ ಮೊದಲ ಚೆಂಡು ಸಿಕ್ಸರ್ ಆದಾಗ ಒತ್ತಡ ಹೆಚ್ಚಾಗಿತ್ತು. ಆ ಬಳಿಕ ನಾನು ಎಚ್ಚರಿಕೆಯಿಂದ ಬೌಲಿಂಗ್ ಮಾಡಿದ್ದೆ ಎಂದು ಹೇಳಿದರು.
ಐಪಿಎಲ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದ ಭುವಿ ಪ್ರಸ್ತುತ ಐಪಿಎಲ್‌ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 5.40 ಇಕಾನಮಿ ರೇಟ್‌ನಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ.