ಬ್ರಿಟನ್ ನ್ಯಾಯಾಲಯದ ಕೈಯಲ್ಲಿ ಮಲ್ಯ ಭವಿಷ್ಯ
ಹೊಸದಿಲ್ಲಿ, ಎ.19: ದೇಶದ ವಿವಿಧ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂ. ಸುಸ್ತಿಬಾಕಿ ಉಳಿಸಿಕೊಂಡು ದೇಶದಿಂದ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತೀಯ ನ್ಯಾಯಾಲಯದ ಕಟಕಟೆಗೆ ಕರೆತರುವ ಕೇಂದ್ರದ ಪ್ರಯತ್ನಕ್ಕೆ ಇದೀಗ ವೇಗ ದೊರಕಿದೆ. ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಬೇಕೇ ಬೇಡವೇ ಎಂಬ ವಿಚಾರ ಇದೀಗ ಬ್ರಿಟನ್ ನ್ಯಾಯಾಲಯದ ಆದೇಶವನ್ನು ಅವಲಂಬಿಸಿದೆ.
ಐಡಿಬಿಐ ಬ್ಯಾಂಕ್ ಹಗರಣ ಮತ್ತು ಸೇವಾ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಡಿಕೊಂಡ ಗಡೀಪಾರು ಮನವಿಯ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಬ್ರಿಟನ್‌ನ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಮಲ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆದರೆ ಇದು ಹಣಕಾಸು ಅಪರಾಧದಲ್ಲಿ ಸಾಮಾನ್ಯ ಕ್ರಮವಾಗಿರುವ ಹಿನ್ನೆಲೆಯಲ್ಲಿ ಷರತ್ತುಬದ್ಧ ಜಾಮೀನಿನೊಂದಿಗೆ ಅವರನ್ನು ಬಳಿಕ ಬಿಡುಗಡೆ ಮಾಡಲಾಯಿತು. ಮಲ್ಯ ಅವರ ಗಡೀಪಾರು ಮನವಿಯ ವಿಚಾರಣೆಯನ್ನು ಮೇ 17ಕ್ಕೆ ಹಿರಿಯ ಜಿಲ್ಲಾ ನ್ಯಾಯಾಧೀಶರು ನಿಗದಿಪಡಿಸಿದ್ದು, ಅದುವರೆಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಭಾರತದ ಮೂರು ನ್ಯಾಯಾಲಯಗಳು ಈ ಉದ್ಯಮಿಯನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಿವೆ. ಗಡೀಪಾರು ವಾರೆಂಟ್ ಬಗೆಗೆ ವಿಚಾರಿಸಲು ಹೋಗಿದ್ದಾಗ ಅವರನ್ನು ಲಂಡನ್ ಠಾಣೆಯಲ್ಲಿ ಬಂಧಿಸಲಾಯಿತು. ಇದು ಭಾರತೀಯ ತನಿಖಾ ಸಂಸ್ಥೆಗಳು ಹಾಗೂ ಮಲ್ಯ ನಡುವೆ ನಡೆಯುತ್ತಿರುವ ಕಾನೂನು ಸಮರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಬ್ರಿಟನ್ ನ್ಯಾಯಾಲಯಗಳು ಗಡೀಪಾರು ಮನವಿ ಪ್ರಕರಣಗಳಲ್ಲಿ ಬಿಗಿ ನಿಲುವನ್ನು ಅನುಸರಿಸುವ ಹಿನ್ನೆಲೆಯಲ್ಲಿ, ಭಾರತದ ಮನವಿ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ. ಈ ಬೆಳವಣಿಗೆ ಬಗ್ಗೆ ಭಾರತೀಯ ಮಾಧ್ಯಮ ಅತಿರಂಜಿತ ವರದಿ ಪ್ರಕಟಿಸುತ್ತಿವೆ ಎಂದು ಮಲ್ಯ ಕಿಡಿ ಕಾರಿದ್ದಾರೆ.
ನಿರೀಕ್ಷೆಯಂತೆ ಇಂದು ಗಡೀಪಾರು ಮನವಿಯ ವಿಚಾರಣೆ ಆರಂಭವಾಗಿದೆ ಎಂದು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 5.4 ಕೋಟಿ ರೂಪಾಯಿಯ ವೈಯಕ್ತಿಕ ಬಾಂಡ್ ಪಡೆದು ಮಲ್ಯ ಅವರಿಗೆ ಜಾಮೀನು ನೀಡಲಾಗಿದೆ. ಆದರೆ ಸಿಬಿಐ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದ್ದು, ಕಾನೂನಾತ್ಮಕ ನಿರ್ಧಾರ ಸದ್ಯದಲ್ಲೇ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಯ ಬ್ರಿಟನ್ ತೊರೆಯುವ ಪ್ರಯತ್ನ ಮಾಡದಂತೆ ಅಥವಾ ತೊರೆಯದಂತೆ ವೆಸ್ಟ್‌ಮಿನಿಸ್ಟರ್ ಮ್ಯಾಜೆಸ್ಟ್ರೇಟ್ ಕೋರ್ಟ್ ನಿರ್ಬಂಧ ವಿಧಿಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.