ಸ್ವದೇಶಿ ಮಂತ್ರ ಆದೇಶಕ್ಕೆ ಟ್ರಂಪ್ ಸಹಿ: "ಬೈ ಅಮೆರಿಕನ್, ಹೈರ್ ಅಮೆರಿಕನ್"

Update: 2017-04-19 03:52 GMT

ವಾಷಿಂಗ್ಟನ್, ಎ.19: ಅತಿಥಿ ಉದ್ಯೋಗಿ ವೀಸಾ (ಎಚ್-1ಬಿ) ದುರ್ಬಳಕೆಗೆ ತಡೆಯುವ ನಿಟ್ಟಿನಲ್ಲಿ ಅಮೆರಿಕನ್ ಉತ್ಪನ್ನಗಳನ್ನೇ ಖರೀದಿಸಿ, ಅಮೆರಿಕನ್ ವ್ಯಕ್ತಿಗಳನ್ನೇ ನಿಯೋಜಿಸಿಕೊಳ್ಳಿ ಎಂಬ ಮಹತ್ವದ ಆಡಳಿತಾತ್ಮಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಅಮೆರಿಕನ್ ಉದ್ಯೋಗ ರಕ್ಷಣೆ ರಕ್ಷಿಸುವ ಉದ್ದೇಶದ ಈ ಮಹತ್ವದ ಆದೇಶ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಮಾರಕವಾಗುವ ಸಾಧ್ಯತೆ ಇದೆ.

ಅಮೆರಿಕನ್ ಹಾಗೂ ಭಾರತೀಯ ಕಂಪೆನಿಗಳು, ಅಮೆರಿಕನ್ ಉದ್ಯೋಗಿಗಳು ಮಾಡಲಾಗದ ಉದ್ಯೋಗಕ್ಕೆ ವಿದೇಶಿ ಉದ್ಯೋಗಿಗಳನ್ನು ಕರೆತಂದಿರುವುದಾಗಿ ಸಮರ್ಥಿಸಿಕೊಳ್ಳುತ್ತಿವೆ. ಆದರೆ ಟ್ರಂಪ್ ಹಾಗೂ ಸುರಕ್ಷಾತ್ಮಕ ಬೆಂಬಲಿಗರು ಈ ವಾದವನ್ನು ಅಲ್ಲಗಳೆಯುತ್ತಾರೆ. ವಾಸ್ತವವಾಗಿ ಉನ್ನತ ಗುಣಮಟ್ಟದ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದ್ದರೂ, ಕಂಪೆನಿಗಳು ಮಾತ್ರ ಕಡಿಮೆ ವೇತನಕ್ಕೆ ವಿದೇಶಿ ಉದ್ಯೋಗಿಗಳು ಸಿಗುತ್ತಾರೆ ಎಂಬ ಕಾರಣಕ್ಕೆ ಆರಂಭಿಕ ಹಂತದ ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳುತ್ತಿದ್ದು, ಇದು ಅಮೆರಿಕನ್ ಕಾರ್ಮಿಕರ ಪಾಲಿಗೆ ಮಾರಕವಾಗಿದೆ ಎನ್ನುವುದು ಅವರ ಪ್ರತಿಪಾದನೆ.

ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಅವಧಿಯಲ್ಲೇ ಅಮೆರಿಕನ್ನರ ಉದ್ಯೋಗ ಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ತಮ್ಮ ಆಶ್ವಾಸನೆಯನ್ನು ಈಡೇರಿಸಿರುವುದನ್ನು ಕಾರ್ಮಿಕರಿಗೆ ಮನವರಿಕೆ ಮಾಡುವ ಸಲುವಾಗಿ ವಿಸ್ಕಾನ್ಸಿನ್‌ನ ಕೆನೊಶಾದಲ್ಲಿರುವ ಸಲಕರಣೆಗಳ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರು ಫ್ಯಾಕ್ಟರಿ ಆವರಣದಲ್ಲೇ ಈ ಮಹತ್ವದ ಆದೇಶಕ್ಕೆ ಸಹಿ ಮಾಡಿದರು. ಈ ಹೊಸ ಆದೇಶವು ಅತಿಥಿ ಉದ್ಯೋಗಿಗಳ ಎಚ್-1ಬಿ ನಿಯಮಾವಳಿಯನ್ನು ಬಿಗಿಗೊಳಿಸಲಿದೆ. ಇದರ ಜತೆಗೆ ಎಲ್ಲ ಅಮೆರಿಕನ್ ಏಜೆನ್ಸಿಗಳು ಅಮೆರಿಕನ್ ಕಂಪನಿಗಳ ಸರಕು ಹಾಗೂ ಸೇವೆಯನ್ನೇ ಬಳಸಿಕೊಳ್ಳುವುದನ್ನು ಈ ಆದೇಶ ಕಡ್ಡಾಯಪಡಿಸುತ್ತದೆ. ಆದರೆ ಏಕಾಏಕಿಯಾಗಿ ವಿದೇಶಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಬದಲು ಹಂತ ಹಂತವಾಗಿ 85 ಸಾವಿರ ಎಚ್-1ಬಿ ವೀಸಾ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಎಚ್-1ಬಿ ವೀಸಾ ಹೊಂದಿರುವವರ ಪೈಕಿ ಅರ್ಧದಷ್ಟು ಭಾರತೀಯರು ಸೇರಿದ್ದಾರೆ.

ಆದರೆ ಈ ಆದೇಶ ಎಚ್-2ಬಿ ವೀಸಾ ಹೊಂದಿರುವ ಋತುಮಾನಕ್ಕೆ ಅನುಗುಣವಾಗಿ ನೇಮಕಗೊಳ್ಳುವ ಉದ್ಯೋಗಿಗಳಿಗೆ ಅಡ್ಡಿಯಾಗುವುದಿಲ್ಲ. ಅಮೆರಿಕದ ಫಾರ್ಮ್ ಹಾಗೂ ಕೃಷಿಕರು ನೇಮಕ ಮಾಡಿಕೊಳ್ಳುವ ಕಾರ್ಮಿಕರು ಈ ವರ್ಗದಲ್ಲಿ ಬರುತ್ತಾರೆ. ಟ್ರಂಪ್ ಅವರ ಸ್ವಂತ ರೆಸಾರ್ಟ್ ಉದ್ಯೋಗಿಗಳೂ ಈ ವರ್ಗದಲ್ಲಿದ್ದಾರೆ. ಅಂತೆಯೇ ಎಚ್-1ಬಿ ಉದ್ಯೋಗಿಗಳ ಪತಿ/ಪತ್ನಿ ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸುವ ಬಗೆಗೆ ಆದೇಶದಲ್ಲಿ ಯಾವ ಉಲ್ಲೇಖವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News