ಅಡ್ವಾಣಿ,ಎಂ.ಎಂ. ಜೋಶಿ, ಉಮಾಭಾರತಿ ವಿರುದ್ಧ ಕ್ರಿಮಿನಲ್ ಕೇಸ್
ಹೊಸದಿಲ್ಲಿ, ಎ.19: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸಹಿತ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.
ಅಡ್ವಾಣಿ ಸಹಿತ ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಪುನರಾರಂಭಿಸಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಪಿ.ಸಿ ಘೋಷ್ ಹಾಗೂ ಆರ್‌ಎಫ್ ನಾರಿಮನ್ ಅವರಿದ್ದ ನ್ಯಾಯಪೀಠ ಕರಸೇವಕರು ಹಾಗೂ ಎಲ್ಲ ಪ್ರಮುಖ ನಾಯಕರ ವಿರುದ್ಧ ವಿಚಾರಣೆಗೆ ಅಸ್ತು ಎಂದಿದೆ.
ರಾಯ್‌ಬರೇಲಿಯಲ್ಲಿ ನಡೆಯುತ್ತಿರುವ ಪ್ರಕರಣವನ್ನು ಲಕ್ನೋಗೆ ನಾಲ್ಕು ವಾರದಲ್ಲಿ ವರ್ಗಾವಣೆ ಮಾಡಬೇಕು. ಇನ್ನು ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರಾಜ್ಯಪಾಲ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಅವರ ವಿರುದ್ಧ ಕ್ರಿಮಿನಲ್ ಕೇಸ್ ಅನ್ವಯವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತಾಂತ್ರಿಕ ಕಾರಣದಿಂದ ಲಕ್ನೋ ನ್ಯಾಯಾಲಯ 2001ರಲ್ಲಿ ಪ್ರಕರಣದ ವಿಚಾರಣೆಯನ್ನು ಕೈಬಿಟ್ಟಿತ್ತು. ಅಡ್ವಾಣಿ ಸಹಿತ 13 ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರಿಸುವಂತೆ ಕೋರಿ ಸಿಬಿಐ ಒಂದು ವರ್ಷದ ಹಿಂದೆ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ 16 ವರ್ಷಗಳ ಬಳಿಕ ತನಿಖೆ ಪುನರಾರಂಭವಾಗಲಿದೆ.
ವಿಚಾರಣೆಯು ದಿನದಿಂದ ದಿನಕ್ಕೆ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಬಾರದು. ವಿಚಾರಣೆ ಮುಗಿಯುವ ತನಕ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ವರ್ಗಾವಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.