ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ಯೋಧ ಬಲಿ
ಜಮ್ಮು,ಎ.19: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಮೆಂಧರ್ ವಿಭಾಗದಲ್ಲಿಯ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೋರ್ವ ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿದ್ದಾನೆ. ಇದು 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಯೋಧನೋರ್ವ ಇಂತಹ ಸಾವನ್ನು ಕಂಡಿರುವ ಎರಡನೇ ಘಟನೆಯಾಗಿದೆ.
ಮಂಗಳವಾರ ಈ ಘಟನೆ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಯೋಧ ರವೀಂದರ್ ಸಿಂಗ್ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿ ರೆಳೆದಿದ್ದಾನೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು.
ಸೋಮವಾರ ರಾತ್ರಿ ಪೂಂಛ್ ಜಿಲ್ಲೆಯ ಮೆಂಧರ್ ವಿಭಾಗದಲ್ಲಿಯ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಾಯಿ ಮನಮೋಹನ್ ಬುಧಾನಿ (23) ಕೂಡ ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡಿಗೆ ಬಲಿಯಾಗಿದ್ದ.
ಬುಧಾನಿ ಪಾಕಿಸ್ತಾನಿ ಸೈನಿಕರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬ ಕೆಲವು ಮಾಧ್ಯಮಗಳ ವರದಿಗಳನ್ನು ರಕ್ಷಣಾ ವಕ್ತಾರ ಲೆಕಮನೀಷ್ ಮೆಹ್ತಾ ನಿರಾಕರಿಸಿದ್ದಾರೆ.