ತಲೆ ಬೋಳಿಸಿಕೊಂಡ ಸೋನು ನಿಗಮ್!

Update: 2017-04-19 09:59 GMT

ಹೊಸದಿಲ್ಲಿ, ಎ.19: ಅಝಾನ್‌ಗೆ ಸಂಬಂಧಿಸಿದ ಟ್ವೀಟರ್ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೋಲ್ಕತಾದ ವೌಲ್ವಿಯೊಬ್ಬರು ತನ್ನ ತಲೆಗೆ 10 ಲಕ್ಷ ರೂ. ಘೋಷಿಸಿದ್ದಕ್ಕೆ ಪ್ರತಿಯಾಗಿ ಸೋನು ನಿಗಮ್ ಸ್ವತಹ ತಲೆ ಬೋಳಿಸಿಕೊಂಡಿದ್ದಾರೆ.
 ವೌಲ್ವಿಯ ಟ್ವೀಟ್‌ಗೆ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ನಿಗಮ್,‘‘ಇದು ಧಾರ್ಮಿಕ ಗುಂಡಾಗಿರಿಯಲ್ಲ. ನಾನು ಇಂದು ಮಧ್ಯಾಹ್ನ 2 ಗಂಟೆಗೆ ತಲೆ ಬೋಳಿಸಿಕೊಳ್ಳಲು ಸಿದ್ಧನಿದ್ದೇನೆ. ವೌಲ್ವಿಯವರೇ ನೀವು 10 ಲಕ್ಷ ರೂ.ವನ್ನು ಸಿದ್ಧವಾಗಿಟ್ಟುಕೊಳ್ಳಿ. ಈ ಸಂದರ್ಭದ ವರದಿ ಮಾಡಲು ಪತ್ರಕರ್ತರನ್ನು ಸ್ವಾಗತಿಸುವೆ’’ ಎಂದು ಹೇಳಿದ್ದರು.

 ‘‘ನಾನು ಜಾತ್ಯತೀತ ವ್ಯಕ್ತಿ. ನಾನು ಆಝಾನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಅತಿಯಾದ ಶಬ್ದದ ಬಗ್ಗೆ ನನ್ನ ವಿರೋಧವಿದೆ. ಧ್ವನಿವರ್ಧಕದ ಮೂಲಕ ದೊಡ್ಡ ಧ್ವನಿ ಹೊರಹಾಕುವುದು ನನ್ನ ಪ್ರಕಾರ ಗೂಂಡಾಗಿರಿಯಾಗಿದೆ’’ ಎಂದು ಸುದ್ದಿಗಾರರಿಗೆ ಸೋನು ನಿಗಮ್ ತಿಳಿಸಿದ್ದಾರೆ. ದೇಶದಲ್ಲಿ ಏನಾಗುತ್ತಿದೆ? ಯಾರೂ ಕೂಡ ಯಾರನ್ನೂ ಹೊಡೆದು ಕೊಲ್ಲಬಹುದು. ಯಾರೂ ಕೂಡ ಫತ್ವಾ ಹೊರಡಿಸಬಹುದು. ನಾನು ಒಂದು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ. ನಾನು ದೇವಸ್ಥಾನಗಳು ಹಾಗೂ ಗುರುದ್ವಾರದ ಬಗ್ಗೆಯೂ ಟ್ವಿಟರ್‌ನಲ್ಲಿ ಬರೆದಿದ್ದೆ. ಆದರೆ ಅವರ್ಯಾರು ನನಗೆ ನೋಟಿಸ್ ನೀಡಿಲ್ಲ ಎಂದು ಸೋನು ನಿಗಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಸ್ಲಿಮರು ಮುಂಜಾನೆ ಮಾಡುವ ಪ್ರಾರ್ಥನೆಗೆ ನಾನು ಇಸ್ಲಾಂ ಧರ್ಮದವನಲ್ಲದಿದ್ದರೂ ನಿದ್ರೆಯಿಂದ ಬೇಗನೆ ಏಳಬೇಕಾಗುತ್ತದೆ ಎಂದು ಸೋಮವಾರ ಟ್ವೀಟ್ ಮಾಡಿದ್ದ ಸೋನು ನಿಗಮ್ ವಿವಾದ ಹುಟ್ಟುಹಾಕಿದ್ದರು. ಅವರ ಟ್ವೀಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿತ್ತು.ಸೋನು ಟ್ವೀಟ್‌ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.

ಸೋನು ನಿಗಮ್ ಟ್ವೀಟ್‌ಗೆ ಫತ್ವಾ ಹೊರಡಿಸಿದ್ದ ಕೋಲ್ಕತಾ ಮೂಲದ ವೌಲ್ವಿಯೊಬ್ಬರು, ‘‘ಸೋನು ತಲೆಗೂದಲನ್ನು ಬೋಳಿಸಿ, ಕುತ್ತಿಗೆಗೆ ಚಪ್ಪಲಿಯ ಹಾರ ಹಾಕಿ ದೇಶಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರೂ.ಬಹುಮಾನ ನೀಡುವೆ’’ ಎಂದು ಹೇಳಿದ್ದರು. ಎ.21 ರಂದು ಸೋನು ವಿರುದ್ಧ ನಗರದಲ್ಲಿ ಬೃಹತ್ ರ್ಯಾಲಿ ನಡೆಸುವುದಾಗಿಯೂ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News