ಪತ್ನಿ ಕೊಂದ ಭಾರತೀಯನ ಹೆಸರು ಎಫ್‌ಬಿಐಯ ‘ಬೇಕಾದವರು’ ಪಟ್ಟಿಯಲ್ಲಿ

Update: 2017-04-19 13:59 GMT

ವಾಶಿಂಗ್ಟನ್, ಎ. 19: ಎರಡು ವರ್ಷಗಳ ಹಿಂದೆ ಅಮೆರಿಕದ ರೆಸ್ಟೋರೆಂಟ್ ಒಂದರ ಅಡುಗೆ ಕೋಣೆಯಲ್ಲಿ ತನ್ನ ಹೆಂಡತಿಯನ್ನು ಕೊಂದು ಪರಾರಿಯಾದ 26 ವರ್ಷದ ಭಾರತ ರಾಷ್ಟ್ರೀಯನನ್ನು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ತನ್ನ ಅತ್ಯಂತ ಬೇಕಾದವರ ಪಟ್ಟಿಯ ಮೊದಲ 10ರಲ್ಲಿ ಸೇರಿಸಿದೆ.

ಭದ್ರೇಶ್‌ಕುಮಾರ್ ಚೇತನ್‌ಭಾಯ್ ಪಟೇಲ್‌ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಡಾಲರ್ (64.57 ಲಕ್ಷ ರೂಪಾಯಿ) ಬಹುಮಾನ ನೀಡುವುದಾಗಿ ಎಫ್‌ಬಿಐ ಘೋಷಿಸಿದೆ.

ಪಟೇಲ್ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಅತ್ಯಂತ ಅಪಾಯಕಾರಿ ಎಂಬುದಾಗಿ ಪರಿಗಣಿಸುವಂತೆ ಎಫ್‌ಬಿಐ ಎಚ್ಚರಿಸಿದೆ.

ಆತ ತನ್ನ 21 ವರ್ಷದ ಹೆಂಡತಿ ಪಾಲಕ್ ಭದ್ರೇಶ್‌ಕುಮಾರ್ ಪಟೇಲ್‌ಗೆ ದೊಡ್ಡ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದನು. ಮೇರಿಲ್ಯಾಂಡ್ ರಾಜ್ಯದ ಹ್ಯಾನೋವರ್‌ನಲ್ಲಿರುವ ರೆಸ್ಟೋರೆಂಟ್ ಅಡುಗೆ ಕೋಣೆಯಲ್ಲಿ ಮಹಿಳೆಯ ಶವ 2015 ಎಪ್ರಿಲ್ 12ರಂದು ಪತ್ತೆಯಾಗಿತ್ತು. ಗಂಡ ಹೆಂಡತಿಯಿಬ್ಬರೂ ರೆಸ್ಟೋರೆಂಟ್‌ನ ಉದ್ಯೋಗಿಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News