×
Ad

ರಾಜಸ್ಥಾನ:ಯುವ ಬುಡಕಟ್ಟು ದಂಪತಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ

Update: 2017-04-19 22:13 IST

ಜೈಪುರ,ಎ.19: ರಾಜಸ್ಥಾನದ ಬುಡಕಟ್ಟು ಜಿಲ್ಲೆ ಬಂಸ್ವಾರಾದಲ್ಲಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದ ಯುವಜೋಡಿಯನ್ನು ಗ್ರಾಮಸ್ಥರು ಥಳಿಸಿ,ಬೆತ್ತಲೆ ಮೆರವಣಿಗೆ ಮಾಡಿದ ಹೇಯ ಘಟನೆ ನಡೆದಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶಂಭುಪುರ ಗ್ರಾಮದಲ್ಲಿ ರವಿವಾರ ಈ ಘಟನೆ ನಡೆದಿದೆ. ಗ್ರಾಮದ ಯುವಕ ಕಚ್ರು (20) ಸಂಬಂಧದಲ್ಲಿ ತನಗೆ ಸೋದರಿಯಾಗಿರುವ 18ರ ಹರೆಯದ ಯುವತಿಯನ್ನು ಪ್ರೇಮಿಸುತ್ತಿದ್ದ. ಸಮಾಜವು ಒಪ್ಪಿಕೊಳ್ಳದ ಈ ಸಂಬಂಧಕ್ಕೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದಾಗ ಮಾ.22ರಂದು ಈ ಜೋಡಿ ನೆರೆಯ ಗುಜರಾತ್‌ಗೆ ಪರಾರಿಯಾಗಿ ಅಲ್ಲಿ ಮದುವೆ ಮಾಡಿಕೊಂಡಿದ್ದರು.

ನವದಂಪತಿ ಗುಜರಾತ್‌ನಲ್ಲಿರುವುದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಇಬ್ಬರನ್ನೂ ಮರಳಿ ಕರೆ ತಂದು, ಅವರನ್ನು ಅಮಾನುಷವಾಗಿ ಥಳಿಸಿ,ವಿವಸ್ತ್ರಗೊಳಿಸಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ ಮಂಗಳವಾರ ಶಂಭುಪುರಕ್ಕೆ ಧಾವಿಸಿದ ಕಲಿಂಜ್ರಾ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಚ್ರುವನ್ನು ಬಂಸ್ವಾರಾದ ಸಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ವೈದ್ಯರ ತಂಡವೊಂದು ಯುವತಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದೆ.

ಸಂಬಂಧದಲ್ಲಿ ಅಣ್ಣ-ತಂಗಿಯಾಗಿದ್ದರೂ ಪ್ರೇಮಸಂಬಂಧವನ್ನು ಹೊಂದಿದ್ದ ಜೋಡಿಗೆ ಪಾಠ ಕಲಿಸಲು ಗ್ರಾಮಸ್ಥರು ಖಾಪ್ ಪಂಚಾಯತ್‌ನಂತಹ ಆದೇಶವನ್ನು ಹೊರಡಿಸಿದ್ದರು. ಎರಡೂ ಕುಟುಂಬಗಳ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ತಮ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಅಸಹಾಯಕರಾಗಿದ್ದೆವು ಎಂದು ಈ ಜೋಡಿಯ ಕುಟುಂಬ ಸದಸ್ಯರು ಹೇಳಿಕೆಯನ್ನು ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News