ಮುಸ್ಲಿಂ ಬಾಲಕಿಯ ಹಿಜಾಬ್ ಕಿತ್ತೆಸೆದ ದುಷ್ಕರ್ಮಿ
ವಾಷಿಂಗ್ಟನ್, ಎ.19: ಅಪರಿಚಿತ ವ್ಯಕ್ತಿಯೋರ್ವ 14ರ ಹರೆಯದ ಮುಸ್ಲಿಂ ಬಾಲಕಿಯ ಹಿಜಾಬ್ (ಶಿರವಸ್ತ್ರ) ಕಿತ್ತೆಸೆದು ‘ಭಯೋತ್ಪಾದಕರು’ ಎಂದು ಬೊಬ್ಬಿಟ್ಟ ಘಟನೆ ಅಮೆರಿಕದ ಜಾರ್ಜಿಯದಲ್ಲಿ ನಡೆದಿದೆ. ಅಟ್ಲಾಂಟದಲ್ಲಿರುವ ಪೆರಿಮಿಟರ್ ಮಾಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ 9:40ರ ವೇಳೆ ತಂಡದ ಜೊತೆ ಈ ಬಾಲಕಿ ಸಾಗುತ್ತಿದ್ದಾಗ ಈ ಗುಂಪಿನ ಬಳಿ ಬಂದ ವ್ಯಕ್ತಿಯೋರ್ವ, ಬಾಲಕಿಯ ಹಿಜಾಬ್ ಕಿತ್ತೆಸೆದು, ಭಯೋತ್ಪಾದಕರು ಎಂದು ಕಿರುಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಡನ್‌ವೂಡಿ ಪೊಲೀಸರು ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. ಇದೊಂದು ಆಕ್ರಮಣದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ. ಡನ್‌ವೂಡಿ ವಿವಿಧ ಜನಾಂಗದ ವ್ಯಕ್ತಿಗಳು ಸಾಮರಸ್ಯದಿಂದ ಬದುಕುತ್ತಿರುವ ಪ್ರದೇಶ. ಇಲ್ಲಿ ಯಾವುದೇ ಧಾರ್ಮಿಕ ನಂಬಿಕೆಯ ಜನರಿಗೂ ಸ್ವಾಗತವಿದೆ. ಹೀಗಿರುವಾಗ ಇಂತಹ ಪ್ರಕರಣ ಅಪರೂಪದ ಘಟನೆಯಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಬಿಲ್ಲಿ ಗ್ರೊಗಾನ್ ತಿಳಿಸಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 1000 ಡಾಲರ್ ಬಹುಮಾನವನ್ನು ‘ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್’ನ ಜಾರ್ಜಿಯಾ ಘಟಕದ ಸಮಿತಿ ಘೋಷಿಸಿದೆ.