ಜಾಧವ್ ಪ್ರಕರಣದಲ್ಲಿ ಮಧ್ಯೆಪ್ರವೇಶಿಸಲು ದಿಲ್ಲಿ ಹೈಕೋರ್ಟ್ ನಕಾರ

Update: 2017-04-19 18:14 GMT

ಹೊಸದಿಲ್ಲಿ,ಎ.19: ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ತೀರ್ಪಿಗೊಳಗಾದ ಭಾರತದ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

‘‘ಕುಲಭೂಷಣ್ ಜಾಧವ್ ಬಿಡುಗಡೆಗಾಗಿ ಕೇಂದ್ರ ಸರಕಾರವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈ ವಿಷಯವಾಗಿ ನ್ಯಾಯಾಲಯವು ಮಧ್ಯೆಪ್ರವೇಶಿಸಲಾರದು’’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಾಧೀಶರಾದ ಅನು ಮಲ್ಹೋತ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಕುಲಭೂಷಣ್ ಜಾಧವ್ ಪ್ರಕರಣವು ಒಂದು ಸೂಕ್ಷ್ಮಸಂವೇದಿ ವಿಷಯ ಎಂದು ಅಭಿಪ್ರಾಯಿಸಿದ ನ್ಯಾಯಪೀಠವು ಅವರ ಬಿಡುಗಡೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ನ್ಯಾಯಾಲಯದಲ್ಲಿ ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲವೆಂದು ಅದು ಹೇಳಿದೆ.

  ಇದರಿಂದ ಅವರ ಬಿಡುಗಡೆಗಾಗಿ ನಡೆಯುವ ಪ್ರಯತ್ನಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆಯೆಂದು ಅದು ತಿಳಿಸಿದೆ. ಇತರ ದೇಶಗಳಲ್ಲಿ ಅಪಹೃತರಾದ ಭಾರತೀಯರ ಬಿಡುಗಡೆಗಾಗಿ ಪ್ರಯತ್ನಿಸಲು ರಾಜಕೀಯ ಶಿಷ್ಟಾಚಾರ ಸಂಹಿತೆಯನ್ನು ರೂಪಿಸಬೇಕೆಂಬ ಅರ್ಜಿದಾರರ ಮನವಿಯನ್ನು ಅದು ತಳ್ಳಿಹಾಕಿದೆ. ವಿಭಿನ್ನ ಸನ್ನಿವೇಶಗಳಲ್ಲಿ ಒಂದೇ ಸೂತ್ರವನ್ನು ಅಳವಡಿಸಲು ಸಾಧ್ಯವಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News