ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ನಾವು ಬುದ್ದಿಕಲಿಸುತ್ತೇವೆ: ಪ್ರಧಾನಿಗೆ ಮಧ್ಯಪ್ರದೇಶದ ಬುಡಕಟ್ಟು ಜನರ ಪತ್ರ
ಭೋಪಾಲ, ಎ.20: ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುವವರಿಗೆ ತಕ್ಕ ಉತ್ತರ ನಮ್ಮಲ್ಲಿದೆ. ಏಟಿಗೆ ಇದಿರೇಟು ಎಂಬಂತೆ ಅವರಿಗೆ ಅವರದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಬೇಕು. ನಮಗೊಂದು ಅವಕಾಶ ಕೊಟ್ಟರೆ ನಮ್ಮ ಕವಣೆಯ ಕಲ್ಲೇಟಿನಿಂದ ಅವರಿಗೆ ಬುದ್ದಿಕಲಿಸುತ್ತೇವೆ ಎಂದು ಮಧ್ಯಪ್ರದೇಶದ ಬುಡಕಟ್ಟು ಜನರ ತಂವೊಂದು ಪ್ರಧಾನಿಗೆ ಪತ್ರ ಬರೆದಿದೆ.
ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಕಲ್ಲೇಟಿಗೆ ಭದ್ರತಾ ಪಡೆಗಳು ಅಸಹಾಯಕರಾಗಿ ನಿಲ್ಲುವಂತಹ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದರೆ ರಕ್ತ ಕುದಿಯುತ್ತದೆ. ಇಂತವರಿಗೆ ‘ಮುಟ್ಟಿನೋಡುವ ರೀತಿಯಲ್ಲಿ’ ಉತ್ತರ ಕೊಡುತ್ತೇವೆ. ಕಲ್ಲೇಟಿಗೆ ಕಲ್ಲೇಟಿನ ಉತ್ತರ ನೀಡಿ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎನ್ನುತ್ತಾನೆ ಕವಣೆಯಿಂದ ಕಲ್ಲೆಸೆಯುವ ಕಲೆಯಲ್ಲಿ ನಿಷ್ಣಾತವಾಗಿರುವ ‘ಭಿಲ್’ ಬುಡಕಟ್ಟು ಜನಾಂಗದ ಯುವಕ ಭಾನು ಭುರಿಯ. ಭಾರತದ ಸೇನೆಯಲ್ಲಿ ‘ಕವಣೆ ಬಟಾಲಿಯನ್’ ಸ್ಥಾಪಿಸಬೇಕು ಎಂದೂ ಈತ ಬೇಡಿಕೆ ಮುಂದಿರಿಸಿದ್ದಾನೆ.
ಹಗ್ಗದ ತುಂಡೊಂದರ ಮಧ್ಯಭಾಗದಲ್ಲಿ ರಬ್ಬರ್ ಅಥವಾ ಬಟ್ಟೆಯ ತುಂಡೊಂದನ್ನು ಕಟ್ಟಲಾಗುತ್ತದೆ.ಇದರಲ್ಲಿ ಕಲ್ಲನ್ನು ಇರಿಸಿ ಹಗ್ಗದ ಎರಡೂ ಬದಿಯನ್ನು ಕೈಯಲ್ಲಿ ಹಿಡಿದು ವೃತ್ತಾಕಾರವಾಗಿ ತಿರುಗಿಸಲಾಗುತ್ತದೆ. ಸಾಕಷ್ಟು ವೇಗ ಪಡೆದುಕೊಂಡ ಬಳಿಕ ಹಗ್ಗದ ಒಂದು ತುದಿಯನ್ನು ಬಿಟ್ಟಾಗ ನಡುವೆ ಸಿಕ್ಕಿಸಿರುವ ಕಲ್ಲು ರಾಕೆಟ್‌ನಂತೆ ವೇಗವಾಗಿ ಗುರಿಯತ್ತ ಸಾಗುತ್ತದೆ. ಬೇಟೆ ಆಡುವಾಗ ಅಥವಾ ಬೆಳೆಗೆ ತೊಂದರೆಯೊಡ್ಡುವ ಕಾಡುಪ್ರಾಣಿಗಳನ್ನು ಬೆದರಿಸಲು ಕವಣೆಯನ್ನು ಬಳಸಲಾಗುತ್ತದೆ.
ಕವಣೆಯಿಂದ ಚಿಮ್ಮುವ ಕಲ್ಲು ಕೈಯಿಂದ ಎಸೆಯುವ ಕಲ್ಲಿಗಿಂತ ಮೂರು ಪಟ್ಟು ವೇಗದಲ್ಲಿ ಚಲಿಸುತ್ತದೆ. ಕೆಲವು ನಿಷ್ಣಾತ ಬುಡಕಟ್ಟು ಜನರು ಎಸೆಯುವ ಕಲ್ಲು 50 ಮೀಟರ್‌ಗೂ ಹೆಚ್ಚು ದೂರ ಸಾಗಿ ಗುರಿಯನ್ನು ತಲುಪುತ್ತದೆ ಎಂದು ಸುಮಾರು ಎರಡು ದಶಕಗಳ ಕಾಲ ಬುಡಕಟ್ಟು ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಸಿ.ಭಾಸ್ಕರ್ ಹೇಳುತ್ತಾರೆ. ನಾವು ದೇಶಪ್ರೇಮಿಗಳು. ಶತ್ರುಗಳು ನಮ್ಮ ಯೋಧರನ್ನು ಘಾಸಿಗೊಳಿಸುವಾಗ ನಮ್ಮ ರಕ್ತ ಕುದಿಯತ್ತದೆ ಎನ್ನುತ್ತಾರೆ ಡೊಟಡ್ ಗ್ರಾಮದ ನವಲ್ ಸಿಂಗ್. ಕಲ್ಲೆಸೆಯುವವರ ಮೇಲೆ ಗುಂಡು ಹಾರಿಸಲೂ ಆಗದೆ ಅಸಹಾಯಕ ಸ್ಥಿತಿಯಲ್ಲಿರುವ ನಮ್ಮ ಯೋಧರ ನೆರವಿಗೆ ಧಾವಿಸಲು ನಮಗೊಂದು ಅವಕಾಶ ನೀಡಬೇಕು ಎಂಬುದು ಇವರ ಬೇಡಿಕೆ.
ಝಬುವಾ ಪಟ್ಟಣದ ಹೊರಭಾಗದಲ್ಲಿರುವ ಹಾತಿಪಾವೊ ಬೆಟ್ಟದ ಮೇಲೆ ಸುಮಾರು 100ಕ್ಕೂ ಹೆಚ್ಚು ಮಂದಿ ಬುಡಕಟ್ಟು ಜನರು ತಮ್ಮ ಕಲ್ಲೆಸೆತದ ಕಲೆಗೆ ಸಾಣೆ ಹಿಡಿಯುತ್ತಿದ್ದಾರೆ. ಸರಕಾರ ‘ಕವಣೆ ಬಟಾಲಿಯನ್’ ಸ್ಥಾಪಿಸಿ ತಮ್ಮನ್ನು ಕಾಶ್ಮೀರದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಬೇಕು ಎಂಬುದು ಇವರ ಕೋರಿಕೆ.
ಬುಧವಾರ ಬುಡಕಟ್ಟು ಜನರ ತಂಡವೊಂದು ಝಬುವ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಪ್ರಧಾನಿಗೆ ತಲುಪಿಸಲು ಮನವಿಯೊಂದನ್ನು ಸಲ್ಲಿಸಿದರು. ದೇಶಸೇವೆ ಮಾಡಲು ನಮಗೊಂದು ಅವಕಾಶ ಕೊಡಿ. ನಮ್ಮ ಸಾಮರ್ಥ್ಯ ತೋರಿಸುತ್ತೆವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಧ್ಯಪ್ರದೇಶದ ಅತ್ಯಂತ ಬಡ ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪ್ರಾಬಲ್ಯವಿರುವ ಝಬುವಾ ಜಿಲ್ಲೆಯೂ ಸೇರಿದೆ.2011ರ ಗಣತಿ ಪ್ರಕಾರ ದೇಶದಲ್ಲಿ ಕನಿಷ್ಟ ಸಾಕ್ಷರತಾ ಪ್ರಮಾಣವಿರುವ ಜಿಲ್ಲೆಗಳ ಪಟ್ಟಿಯಲ್ಲಿ ಝಬುವಾ ಎರಡನೇ ಸ್ಥಾನದಲ್ಲಿದೆ.
ನಮ್ಮ ಬುಡಕಟ್ಟು ಜನಾಂಗದ ದಂತಕಥೆಯಾಗಿರುವ ತಾಂತಿಯಾ ಭಿಲ್ ಎಂಬವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದೇವೆ. ಈಗ ಇನ್ನೊಂದು ಅವಕಾಶ ಕೊಟ್ಟರೆ ದೇಶಸೇವೆ ಮಾಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಇವರು.