ವಿಐಪಿಗಳಿಗೆ ನೀಡಿರುವ ಭದ್ರತೆಯನ್ನು ತಗ್ಗಿಸುವುದಿಲ್ಲ: ನಾಯ್ಡು
ಹೊಸದಿಲ್ಲಿ,ಎ.20: ವಿಐಪಿಗಳಿಗೆ ಒದಗಿಸಿರುವ ಭದ್ರತೆಯನ್ನು ತಗ್ಗಿಸುವ ಯಾವುದೇ ಯೋಜನೆಯನ್ನು ಕೇಂದ್ರವು ಹೊಂದಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಗುರುವಾರ ಇಲ್ಲಿ ತಿಳಿಸಿದರು. ತುರ್ತುಸೇವೆಗಳ ವಾಹನಗಳನ್ನು ಹೊರತುಪಡಿಸಿ ಎಲ್ಲ ವಾಹನಗಳ ಮೇಲೆ ಕೆಂಪುದೀಪ ವನ್ನು ಸರಕಾರವು ನಿಷೇಧಿಸಿದ ಒಂದು ದಿನದ ಬಳಿಕ ನಾಯ್ಡು ಅವರ ಈ ಹೇಳಿಕೆಯು ಹೊರಬಿದ್ದಿದೆ.
ಭದ್ರತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಬೇಕಿ ರುವುದರಿಂದ ದೇಶದ ಹಿತಾಸಕ್ತಿಯಲ್ಲಿ ಅವರಿಗೆ ಭದ್ರತೆ ಒದಗಿಸುವುದು ಅಗತ್ಯವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಾಯ್ಡು ಹೇಳಿದರು.
ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಕೇಂದ್ರದ ನಿರ್ಧಾರ ಕುರಿತಂತೆ ಅವರು, ಪ್ರತಿಯೊಬ್ಬರೂ ವಿಐಪಿಯಾಗಿದ್ದಾರೆ ಮತ್ತು ಇದು ನಮ್ಮ ಸರಕಾರದ ನೀತಿಯಾಗಿದೆ ಎಂದರು.
ವಾಹನಗಳ ಮೇಲಿನ ಕೆಂಪುದೀಪಗಳ ನಿಷೇಧ ಸಣ್ಣ ಉಪಕ್ರಮವಾಗಿದ್ದರೂ ಪ್ರತಿಯೊಬ್ಬರನ್ನೂ ಸಮಾನವಾಗಿ ನೋಡಬೇಕೆಂಬ ಸಂದೇಶವನ್ನು ಅದು ರವಾನಿಸುತ್ತದೆ ಎಂದರು. ರಾಜ್ಯ ಸರಕಾರಗಳೂ ಕೆಂಪುದೀಪ ಬಳಕೆಯನು ಕೈಬಿಡುತ್ತವೆ ಎಂದು ಆಶಯ ವ್ಯಕ್ತಪಡಿಸಿದ ಅವರು,ಇಲ್ಲದಿದ್ದರೆ ಅವು ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ರಾಮ ಜನ್ಮಭೂಮಿ-ಬಾಬರಿ ಮಸಿದಿ ವಿವಾದ ಕುರಿತ ಪ್ರಶ್ನೆಗೆ ,ಈ ಪ್ರಕರಣವು ಹಲವಾರು ವರ್ಷಗಳಿಂದಲೂ ನ್ಯಾಯಾಲಯದಲ್ಲಿ ನಡೆಯುತ್ತಿದೆ ಮತ್ತು ಇದರಲ್ಲಿ ಹೊಸದೇನೂ ಇಲ್ಲ ಎಂದು ನಾಯ್ಡು ಉತ್ತರಿಸಿದರು.