ಎಮಿರೇಟ್ಸ್‌ನ ಅಮೆರಿಕ ಯಾನದಲ್ಲಿ ಕಡಿತ

Update: 2017-04-20 14:05 GMT

ದುಬೈ, ಎ. 20: ಅಮೆರಿಕದ ಐದು ಮಾರ್ಗಗಳಲ್ಲಿ ಹಾರುವ ತನ್ನ ವಿಮಾನಗಳ ಸಂಖ್ಯೆಯನ್ನು ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ಎಮಿರೇಟ್ಸ್’ ಕಡಿತಗೊಳಿಸಿದೆ.

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಕೆಲವು ದೇಶಗಳ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಹೇರಿದ ಬಳಿಕ, ಬೇಡಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ಅದು ಹೇಳಿದೆ.

ಕೆಲವು ಮುಸ್ಲಿಮ್ ಬಾಹುಳ್ಯದ ದೇಶಗಳ ನಿರಾಶ್ರಿತರು ಮತ್ತು ನಾಗರಿಕರಿಗೆ ಅಮೆರಿಕ ಪ್ರಯಾಣವನ್ನು ನಿಷೇಧಿಸುವ ಎರಡು ಸರಕಾರಿ ಆದೇಶಗಳಿಗೆ ಟ್ರಂಪ್ ಸಹಿ ಹಾಕಿರುವುದನ್ನು ಸ್ಮರಿಸಬಹುದಾಗಿದೆ. ಈ ಎರಡೂ ಆದೇಶಗಳಿಗೆ ಅಮೆರಿಕದ ನ್ಯಾಯಾಲಯಗಳು ತಡೆಯಾಜ್ಞೆ ವಿಧಿಸಿವೆಯಾದರೂ, ನಿಷೇಧಿತ ದೇಶಗಳ ಪ್ರಯಾಣಿಕರು ಅಮೆರಿಕ ಪ್ರವಾಸದ ಬಯಕೆಯನ್ನು ಕೈಬಿಟ್ಟಿದ್ದಾರೆ.

ಮಾರ್ಚ್‌ನಲ್ಲಿ ಅಮೆರಿಕ ಆಡಳಿತವು ಇನ್ನೊಂದು ಭದ್ರತಾ ಕ್ರಮವನ್ನು ಜಾರಿಗೊಳಿಸಿದ್ದು, ಅದರ ಪ್ರಕಾರ ಹಲವು ಮಧ್ಯಪ್ರಾಚ್ಯ ದೇಶಗಳಿಂದ ಅಮೆರಿಕಕ್ಕೆ ನೇರ ಹಾರಾಟ ಹೊಂದಿರುವ ವಿಮಾನಗಳಲ್ಲಿ ಪ್ರಯಾಣಿಕರು ಮೊಬೈಲ್ ಫೋನ್‌ಗಳಿಗಿಂತ ದೊಡ್ಡದಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವಂತಿಲ್ಲ

‘‘ಪ್ರವೇಶ ವೀಸಾ ನೀಡುವಲ್ಲಿ ಅಮೆರಿಕ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ನಿರ್ಬಂಧಗಳು, ಹೆಚ್ಚಿದ ಭದ್ರತಾ ಮಟ್ಟ ಹಾಗೂ ನಿರ್ದಿಷ್ಟ ಇಲೆಕ್ಟ್ರಾನಿಕ್ ಉಪಕರಣಗಳನ್ನು ಅಮೆರಿಕಕ್ಕೆ ಹೋಗುವ ವಿಮಾನಗಳಲ್ಲಿ ಹಿಡಿದುಕೊಂಡು ಹೋಗಲು ಅವಕಾಶವಿಲ್ಲದಿರುವುದು ಅಮೆರಿಕಕ್ಕೆ ಹೋಗುವ ಪ್ರಯಾಣಿಕರ ಆಸಕ್ತಿಯನ್ನು ಕುಗ್ಗಿಸಿವೆ’’ ಎಂದು ಎಮಿರೇಟ್ಸ್ ವಕ್ತಾರರೊಬ್ಬರು ಹೇಳಿದರು.

ಫೋರ್ಟ್ ಲಾಡರ್ಡೇಲ್ ಮತ್ತು ಓರ್ಲಾಂಡೊಗೆ ಹೋಗುವ ನೇರ ವಿಮಾನಗಳು ಮೇ ತಿಂಗಳಿನಿಂದ ಪ್ರತಿ ದಿನದ ಬದಲು ವಾರಕ್ಕೆ ಐದು ಬಾರಿ ಮಾತ್ರ ಹಾರಲಿವೆ. ಅದೇ ವೇಳೆ, ಸಿಯಾಟಲ್ ಮತ್ತು ಬೋಸ್ಟನ್‌ಗೆ ಹೋಗುವ ನೇರ ವಿಮಾನಗಳು ಜೂನ್‌ನಿಂದ ದಿನಕ್ಕೆ ಎರಡು ಬಾರಿ ಹಾರುವ ಬದಲು ಒಂದ ಬಾರಿ ಮಾತ್ರ ಹಾರಲಿದೆ ಎಂದು ಹೇಳಿಕೆ ತಿಳಿಸಿದೆ.

ದಿನಕ್ಕೆ ಎರಡು ಬಾರಿ ಲಾಸ್ ಏಂಜಲಿಸ್‌ಗೆ ಹಾರುತ್ತಿರುವ ವಿಮಾನಗಳು ಜುಲೈಯಿಂದ ದಿನಕ್ಕೆ ಒಂದು ಬಾರಿ ಮಾತ್ರ ಪ್ರಯಾಣಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News