×
Ad

ಅಮಿತ್ ಶಾ ಅವರನ್ನು ಸಾಕ್ಷಿಯಾಗಿ ಕರೆಸುವಂತೆ ಹೈಕೋರ್ಟ್‌ಗೆ ಕೊಡ್ನಾನಿ ಮೊರೆ

Update: 2017-04-20 21:37 IST

ಅಹ್ಮದಾಬಾದ್,ಎ.20: ತನ್ನ ವಿರುದ್ಧದ 2002ರ ನರೋಡಾ ಪಾಟಿಯಾ ನರಮೇಧ ಪ್ರಕರಣದಲ್ಲಿ ‘ನ್ಯಾಯದ ಹಿತಾಸಕ್ತಿ ’ಯಲ್ಲಿ ಹೆಚ್ಚುವರಿ ಸಾಕ್ಷಿಗಳಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಏಳು ಜನರನ್ನು ನ್ಯಾಯಾಲಯಕ್ಕೆ ಕರೆಸಬೇಕೆಂದು ಕೋರಿ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಅವರು ಸಲ್ಲಿಸಿರುವ ಅರ್ಜಿಯ ಬಗ್ಗೆ ವಿಶೇಷ ತನಿಖಾ ತಂಡ(ಸಿಟ್)ದ ಅಭಿಪ್ರಾಯವನ್ನು ಗುಜರಾತ್ ಉಚ್ಚ ನ್ಯಾಯಾಲಯವು ಕೇಳಿದೆ. ಪ್ರಾಸಿಕ್ಯೂಷನ್ ವಿಶೇಷ ಸಿಟ್ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಯಾವುದೇ ಸಕಾರಣವಿಲ್ಲದೆ ಈ ಎಂಟು ಮುಖ್ಯ ಸಾಕ್ಷಿಗಳನ್ನು ಕೈಬಿಟ್ಟಿದೆ ಎಂದು ಕೊಡ್ನಾನಿ ಅರ್ಜಿಯಲ್ಲಿ ಹೇಳಿದ್ದಾರೆ.

ನರೋಡಾ ಪಾಟಿಯಾ ಹತ್ಯಾಕಾಂಡದಲ್ಲಿ 96 ಜೀವಗಳು ಬಲಿಯಾಗಿದ್ದವು. ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಕೊಡ್ನಾನಿ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ. ಕೊಡ್ನಾನಿಗೆ 28 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು ಸದ್ಯ ಅವರು ಜಾಮೀನಿನಲ್ಲಿ ಹೊರಗಿದ್ದಾರೆ.

ಕೊಡ್ನಾನಿ ಆಗಿನ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News