ದುಬಾರಿ ಪುಸ್ತಕ ಕೊಳ್ಳಲು ಮಕ್ಕಳಿಗೆ ಬಲವಂತ ಬೇಡ: ಶಾಲೆಗಳಿಗೆ ಸಿಬಿಎಸ್‌ಇ ಎಚ್ಚರಿಕೆ
ಹೊಸದಿಲ್ಲಿ, ಎ.20: ಖಾಸಗಿ ಪುಸ್ತಕ ಪ್ರಕಾಶಕರು ಸಿದ್ದಪಡಿಸಿದ ದುಬಾರಿ ಬೆಲೆಯ ಪಠ್ಯಪುಸ್ತಕಗಳನ್ನು ಕೊಳ್ಳಬೇಕೆಂದು ಮಕ್ಕಳನ್ನು ಬಲವಂತ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬಿಎಸ್‌ಇ ಎಚ್ಚರಿಕೆ ನೀಡಿದೆ.
ಎನ್‌ಸಿಇಆರ್‌ಟಿ, ಸಿಬಿಎಸ್‌ಇ ಸಿದ್ದಪಡಿಸಿದ ಕಡಿಮೆ ಬೆಲೆಯ ಪಠ್ಯಪುಸ್ತಕಗಳ ಬಗ್ಗೆ ಶಾಲೆಗಳ ನಿರ್ಲಕ್ಷದ ಧೋರಣೆ ಸರಿಯಲ್ಲ. ಅಲ್ಲದೆ ಶಾಲೆಗಳು ಪುಸ್ತಕ, ಸಮವಸ್ತ್ರ, ಶೂ, ಲೇಖನ ಸಾಮಾಗ್ರಿಗಳು.. ಇತ್ಯಾದಿಗಳನ್ನು ಮಾರಾಟ ಮಾಡುವ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಲಾಗಿದೆ. ದೇಶದಾದ್ಯಂತ 18000ಕ್ಕೂ ಹೆಚ್ಚಿನ ಶಾಲೆಗಳು ಸಿಬಿಎಸ್‌ಸಿಯಲ್ಲಿ ಸಂಯೋಜನೆಗೊಂಡಿದೆ.
ದಿಲ್ಲಿಯಲ್ಲಿ ಖಾಸಗಿ ಪುಸ್ತಕ ಪ್ರಕಾಶಕರೋರ್ವರು ಸಿದ್ದಪಡಿಸಿದ ಪಠ್ಯಪುಸ್ತಕದಲ್ಲಿ ಮಹಿಳೆಯರು 36-24-36ರ ಅಂಗಸೌಷ್ಠವ ಹೊಂದಿರುವುದು ಸೌಂದರ್ಯದ ದ್ಯೋತಕವಾಗಿದೆ ಎಂದು ಉಲ್ಲೇಖಿಸಲಾಗಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು ಮತ್ತು ಆ ಪುಸ್ತಕ ಪ್ರಕಾಶಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.