ಉ.ಪ್ರದೇಶ ಮುಖ್ಯಮಂತ್ರಿಯ ಕಾರು ‘ಕಳವು’..!

Update: 2017-04-20 16:12 GMT

ಲಕ್ನೊ, ಎ.20: ರಾಜ್ಯದಲ್ಲಿ ಅಪರಾಧ ಪ್ರಕರಣದ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಅವರ ಕಾರನ್ನೇ ಕಳವು ಮಾಡಲಾಗಿದೆ ಎಂಬ ದೂರು ಬಂದರೆ ಇದಕ್ಕೆ ಏನನ್ನಬೇಕು?

 ಮುಖ್ಯಮಂತ್ರಿ ಜಿಲ್ಲಾಡಳಿತದ ಕೇಂದ್ರಕಚೇರಿ ವಿಕಾಸ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಂಡಿದ್ದರು. ಇವರು ಸಭೆಯ ಸ್ಥಳಕ್ಕೆ ಆಗಮಿಸಿದಾಗ ಇವರ ಕಾರಿಗೆ ಬೆಂಗಾವಲಾಗಿ 12ಕ್ಕೂ ಹೆಚ್ಚು ಕಾರುಗಳು ಆಗಮಿಸಿದ್ದವು. ಇವನ್ನು ಝಾನ್ಸಿಯ ಸರ್ಕ್ಯೂಟ್ ಹೌಸ್‌ನ ಆವರಣದಲ್ಲಿ ಪಾರ್ಕ್ ಮಾಡಲಾಗಿತ್ತು.

ಕೆಲ ಹೊತ್ತಿನ ಬಳಿಕ ತನ್ನ ಕಾರು ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲ ಎಂಬುದು ಒಬ್ಬ ಚಾಲಕನ ಗಮನಕ್ಕೆ ಬಂದಿದೆ. ತಕ್ಷಣ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಮುಖ್ಯಮಂತ್ರಿಗಳ ಬೆಂಗಾವಲು ಪಡೆಯ ವಾಹನ ಎಂದು ತಿಳಿದೊಡನೆ ಪೊಲೀಸರು ‘ಅಲರ್ಟ್’ ಆದರು. ತಕ್ಷಣ ಕಾರಿನ ಬಗ್ಗೆ ವಿವರವನ್ನು ಎಲ್ಲಾ ಚೆಕ್‌ಪೋಸ್ಟ್‌ಗಳಿಗೂ ರವಾನಿಸಲಾಯಿತು. ಪೊಲೀಸರು ಕಾರ್ಯಾಚರಣೆ ಆರಂಭಿಸಿದರು.

 ಆದರೆ ಕಾರಿನ ಪತ್ತೆಯಿಲ್ಲ. ಪೊಲೀಸರಿಗೆ ಆತಂಕ. ಅಷ್ಟರಲ್ಲೇ ವಿಷಯ ಅರಿತ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ನಡೆದ ಘಟನೆಯನ್ನು ವಿವರಿಸಿದರು. ಮುಖ್ಯಮಂತ್ರಿಯ ಬೆಂಗಾವಲು ವಾಹನ ಪಡೆಯ ಕಾರನ್ನು ಚಾಲಕ ‘ನೋ ಪಾಕಿರ್ಂಗ್’ ಪ್ರದೇಶದಲ್ಲಿ ನಿಲ್ಲಿಸಿದ್ದ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಅಲ್ಲಿಂದ ಕಾರನ್ನು ತೆರವುಗೊಳಿಸಿ, ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ತಾನು ನಿಲ್ಲಿಸಿದ್ದ ಸ್ಥಳದಲ್ಲಿ ಕಾರು ಇಲ್ಲ ಎಂಬ ಗಡಿಬಿಡಿಯಲ್ಲಿ ಅತ್ತಿತ್ತ ನೋಡದೆ ಚಾಲಕ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿತ್ತು.

ಕೊನೆಗೂ ಮುಖ್ಯಮಂತ್ರಿಗಳು ಸಭೆ ಮುಗಿಸಿ ಹೊರಬರುವ ಮೊದಲು ಕಾರು ಪತ್ತೆಯಾಗಿ ಪೊಲೀಸರು ನಿಟ್ಟುಸಿರುಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News