ಆಧಾರ್ ಕಾರ್ಡ್ ಇಲ್ಲದವರಿಗೆ ಗ್ರಾಮೀಣ ಉದ್ಯೋಗ ‘ಖಾತರಿ’ ಇಲ್ಲ: ಆರೋಪ
ಹೊಸದಿಲ್ಲಿ, ಎ.20: ಆಧಾರ್ ಕಾರ್ಡ್ ನೋಂದಣಿ ಮಾಡಿಕೊಳ್ಳುವ ಅಂತಿಮ ಗಡುವು ಮುಕ್ತಾಯಗೊಂಡಿರುವ ಕಾರಣ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯ ನಿರ್ವಹಿಸುವ ಅರ್ಧಾಂಶಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಉದ್ಯೋಗವಂಚಿತರಾಗುವ ಅಪಾಯವಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್‌ಆರ್‌ಇಜಿಎ)ಯಡಿ ಉದ್ಯೋಗ ನಿರಾಕರಿಸುವುದು ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.
ಆದರೆ ಇದನ್ನು ಕೇಂದ್ರ ಸರಕಾರ ನಿರಾಕರಿಸಿದೆ. ಆಧಾರ್ ನೋಂದಣಿಯ ಗಡುವು ಮಾರ್ಚ್ 31ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಅದನ್ನು ಆರು ತಿಂಗಳು ವಿಸ್ತರಿಸಲಾಗಿದೆ. ಕೇವಲ ಶೇ.16ರಷ್ಟು ‘ಸಕ್ರಿಯ ಕಾರ್ಮಿಕರು’ ಆಧಾರ್ ಪಡೆಯಲು ಬಾಕಿಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇಲ್ಲಿ ಒಂದಂಶ ಗಮನಿಸಬಹುದು. ಸಾಮಾಜಿಕ ಕಾರ್ಯಕರ್ತರು ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಕಾರ್ಮಿಕರನ್ನು ಲೆಕ್ಕಕ್ಕೆ ಸೇರಿಸಿದರೆ, ಸರಕಾರ ‘ಸಕ್ರಿಯ ಕಾರ್ಮಿಕರ’ ಲೆಕ್ಕ ಮಾತ್ರ ತೋರಿಸುತ್ತಿದೆ. ಕಳೆದ ಮೂರು ಆರ್ಥಿಕ ವರ್ಷದಲ್ಲಿ ಕನಿಷ್ಟ ಒಂದು ದಿನವಾದರೂ ಈ ಯೋಜನೆಯಡಿ ಕೆಲಸ ಮಾಡಿದವರನ್ನು ‘ಸಕ್ರಿಯ ಕಾರ್ಮಿಕರು’ ಎಂದು ಗುರುತಿಸಲಾಗುತ್ತದೆ.
ಈ ಯೋಜನೆಯಡಿ ನೋಂದಾಯಿತರಾಗಿರುವ ಒಟ್ಟು ಕಾರ್ಮಿಕರ ಸಂಖ್ಯೆ 260.2 ಮಿಲಿಯನ್. ಇವರಲ್ಲಿ ಶೇ.46ರಷ್ಟು (119.2 ಮಿಲಿಯನ್) ಕಾರ್ಮಿಕರು ಆಧಾರ್ ಸಂಖ್ಯೆ ನೀಡಿದ್ದಾರೆ.102.1 ಮಿಲಿಯನ್ ಸಕ್ರಿಯ ಕಾರ್ಮಿಕರಲ್ಲಿ 85.5 ಮಿಲಿಯನ್ (ಶೇ.84) ಆಧಾರ್ ಸಂಖ್ಯೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಹೊಂದಿಲ್ಲದ ಕಾರ್ಮಿಕರಿಗೆ ಅಧಿಕಾರಿಗಳು ಉದ್ಯೋಗ ನಿರಾಕರಿಸುತ್ತಿದ್ದಾರೆ ಎಂದು ಭಾರತೀಯ ಮಹಿಳೆಯರ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆ್ಯನೀ ರಾಜಾ ಹೇಳುತ್ತಾರೆ. ಆದರೆ ಅಂತಿಮ ದಿನಾಂಕವನ್ನು ಸೆ.30ರವರೆಗೆ ವಿಸ್ತರಿಸಿದ ಕಾರಣ ಆಧಾರ್ ಕಾರ್ಡ್ ಇಲ್ಲದವರಿಗೆ ಉದ್ಯೋಗ ನಿರಾಕರಿಸುವ ಪ್ರಶ್ನೆಯೇ ಇಲ್ಲ . ಇಂತಹ ಪ್ರಕರಣ ನಡೆದರೆ ತಕ್ಷಣ ತಮ್ಮ ಗಮನಕ್ಕೆ ತರಬೇಕು. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಪರಾಜಿತ ಸಾರಂಗಿ ತಿಳಿಸಿದ್ದಾರೆ.
ಅವ್ಯವಹಾರ ತಡೆಗಟ್ಟುವ ನೆಪದಲ್ಲಿ ಸುಮಾರು 10 ಮಿಲಿಯನ್ ಜಾಬ್‌ಕಾರ್ಡ್‌ಗಳನ್ನು ತಡೆಹಿಡಿಯಲಾಗಿದೆ ಎಂದೂ ಕಾರ್ಯಕರ್ತರು ಆರೋಪಿಸುತ್ತಾರೆ. ಹಣದ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜಾಬ್‌ಕಾರ್ಡ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಸಾಮಾಜಿಕ ಕಾರ್ಯಕರ್ತರು ಹೇಳುವುದೇ ಬೇರೆ. ಜಾಬ್ ಕಾರ್ಡ್‌ಗೂ ರೇಷನ್ ಕಾರ್ಡ್‌ಗೂ ಸಾಕಷ್ಟು ವ್ಯತ್ಯಾಸಗಳಿವೆ. ರೇಷನ್‌ಕಾರ್ಡ್ ತೋರಿಸಿ ಹಲವು ಅನುಕೂಲಗಳನ್ನು ಪಡೆಯಬಹುದು. ಆದರೆ ಜಾಬ್‌ಕಾರ್ಡ್ ತೋರಿಸಿದ ಕೂಡಲೇ ಹಣ ಆತನ ಖಾತೆಗೆ ವರ್ಗಾವಣೆಯಾಗದು. ಆತ ನಿಜವಾಗಿ ಕೆಲಸ ಮಾಡಿದರೆ ಮಾತ್ರ ಹಣ ಆತನ ಖಾತೆಗೆ ವರ್ಗಾವಣೆಯಾಗುತ್ತದೆ. ಆದ್ದರಿಂದ ‘ಅಕ್ರಮ ಕಾರ್ಡ್’ಗಳ ಪ್ರಶ್ನೆಯೇ ಇಲ್ಲ ಎಂದವರು ಹೇಳುತ್ತಾರೆ. ಅಕ್ರಮ ಕಾರ್ಡ್‌ಗಳನ್ನು ಗುರುತಿಸುವ ಕ್ರಮ, ಯಾವ ಆಧಾರದಲ್ಲಿ ಇವನ್ನು ಅಕ್ರಮ ಎಂದು ಹೆಸರಿಸಲಾಗುವುದು.. ಇತ್ಯಾದಿ ವಿಷಯಗಳನ್ನು ಸರಕಾರ ಬಹಿರಂಗಗೊಳಿಸಬೇಕು ಎಂದವರು ಆಗ್ರಹಿಸುತ್ತಿದ್ದಾರೆ.