​ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಭವಿಷ್ಯನಿಧಿ ಯೋಜನೆ ಜಾರಿಗೆ ಆಗ್ರಹ

Update: 2017-04-20 18:39 GMT

ಮಂಗಳೂರು, ಎ.20: ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಅನುದಾನವನ್ನು ನೀಡಿ ಸಮಗ್ರವಾದ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್(ಸಿಐಟಿಯು)ನ ರಾಜ್ಯ ಸಮಿತಿ ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಾಹಾಂತೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರು ಸೇರಿ ನಾಲ್ಕು ಅಸಂಘಟಿತ ಕಾರ್ಮಿಕ ವಿಭಾಗಕ್ಕೆ ಘೋಷಿಸಿರುವ ಸ್ಮಾರ್ಟ್ ಕಾರ್ಡ್ ಒಳಗೊಂಡ ಪಿಂಚಣಿ ಯೋಜನೆಯು ಅಪೂರ್ಣ ಕಾರ್ಯಕ್ರಮವಾಗಿದೆ. ಅದರ ಬದಲು ಹೆಚ್ಚಿನ ಅನುದಾನವನ್ನು ನೀಡಿ ಸಮಗ್ರ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು ಎಂದರು.

ರಾಜ್ಯದಲ್ಲಿರುವ ಅತ್ಯಂತ ಅಸಂಘಟಿತ ಕಾರ್ಮಿಕ ವಿಭಾಗವಾದ ಹಮಾಲರು, ಆಟೊ ಚಾಲಕರು, ಮನೆಗೆಲಸ ಮಾಡುವ ಮಹಿಳೆಯರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಇತರ ವಿಭಾಗಗಳಿಗೆ ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ರಾಜ್ಯದ ಕಾರ್ಮಿಕ ಇಲಾಖೆಯು ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಭವಿಷ್ಯನಿಧಿ ಯೋಜನೆ ಕುರಿತಾದ ಕರಡನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು ಎಂದು ಹೇಳಿದರು.

ಭವಿಷ್ಯನಿಧಿ ಕಾನೂನು ಜಾರಿಯಾದರೆ ರಾಜ್ಯದ ಅಸಂಘಟಿತ ಕಾರ್ಮಿಕರ ಪಾಲಿಗೆ ಭವಿಷ್ಯದ ಸಂಜೀವಿನಿಯಾಗಲಿದೆ. ಅಲ್ಲದೆ ಇದು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಶ್ರಮಜೀವಿ ಹಮಾಲಿ ಕಾರ್ಮಿಕರಿಗೆ ಮತ್ತು ಇತರ ಅಸಂಘಟಿತರ ಪಾಲಿಗೆ ವರದಾನವಾಗಲಿದೆ ಎನ್ನುವುದು ಅಸಂಘಟಿತ ಕಾರ್ಮಿಕರ ಆಶಯ. ಈ ಕರಡನ್ನು ವಿಧಾನಸಭೆಯಲ್ಲಿ ಮಂಡಿಸಿ ಶಾಸನ ರೂಪಿಸಬೇಕೆಂದು ಒತ್ತಾಯಿಸಿ ಹಲವಾರು ಹೋರಾಟಗಳನ್ನು ಮಾಡಲಾಗಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ನೋಂದಣಿಯಾದ ಸುಮಾರು 11 ಲಕ್ಷ ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರಿಗೆ ವಸತಿ ಯೋಜನೆ ಸೇರಿ ಸಮಗ್ರ ಭವಿಷ್ಯನಿಧಿ ಯೋಜನೆ ಜಾರಿ ಮಾಡಲು ಸರಕಾರ ನಿರ್ಧರಿಸಿರುವ ಕ್ರಮವನ್ನು ಸಿಐಟಿಯು ಸ್ವಾಗತಿಸುತ್ತದೆ. ಕೂಡಲೇ ಅದನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಝ್, ಅಹ್ಮದ್ ಬಾವಾ, ಎಂ.ಬಿ. ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News