ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಿದ ಕಲಾವಿದ!

Update: 2017-04-21 12:56 GMT

ಪ್ಯಾರಿಸ್, ಎ. 21: ಫ್ರಾನ್ಸ್ ಕಲಾವಿದ ಅಬ್ರಹಾಮ್ ಪೊಯಿಂಚೆವಾಲ್ ಸುಮಾರು ಮೂರು ವಾರಗಳ ಕಾಲ ಕೋಳಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆಯೂ ಅವರು ಬಂಡೆಯೊಂದರ ಒಳಗೆ ಒಂದು ವಾರ ಹಾಗೂ ಕರಡಿಯ ಶಿಲ್ಪದೊಳಗೆ ಎರಡು ವಾರಗಳನ್ನು ಕಳೆದು ಗಮನ ಸೆಳೆದಿದ್ದರು.
ಈ ಬಾರಿ ಕೋಳಿ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುವ ಯೋಜನೆಯೊಂದನ್ನು ಅಬ್ರಹಾಮ್ ಕೈಗೆತ್ತಿಕೊಂಡರು. ಇದಕ್ಕಾಗಿ ಪ್ಯಾರಿಸ್‌ನ ಪಲಾಯಿಸ್ ಡಿ ಟೋಕಿಯೊ ಕಾಂಟಂಪರರಿ ಕಲಾ ಮ್ಯೂಸಿಯಂನ ಗಾಜಿನ ಕೋಣೆಯೊಂದನ್ನು ಆರಿಸಿಕೊಂಡರು. ಅಲ್ಲಿ ಮಾರ್ಚ್ ಕೊನೆಯಲ್ಲಿ ತಾಯಿ ಕೋಳಿಯಂತೆ 10 ಮೊಟ್ಟೆಗಳಿಗೆ ತನ್ನದೇ ದೇಹದ ಶಾಖದಿಂದ ಕಾವು ನೀಡಲು ಆರಂಭಿಸಿದರು.

ಮೊಟ್ಟೆಗಳಿಂದ ಮರಿಗಳು ಹೊರಬರಲು 21-26 ದಿನಗಳು ಬೇಕಾಗಬಹುದು ಎಂಬುದಾಗಿ ಅವರು ಊಹಿಸಿದ್ದರು. ಮೊದಲ ಮರಿ ಮಂಗಳವಾರ ಹೊರಬಂತು.

10 ಮೊಟ್ಟೆಗಳ ಪೈಕಿ ಒಂಬತ್ತರಿಂದ ಮರಿಗಳು ಹೊರಬಂದಿವೆ ಹಾಗೂ ಮರಿಗಳನ್ನು ಫಾರ್ಮ್‌ಗೆ ಕಳುಹಿಸಲಾಗುತ್ತಿದೆ ಎಂದು ಮ್ಯೂಸಿಯಂನ ವಕ್ತಾರೆಯೊಬ್ಬರು ಗುರುವಾರ ತಿಳಿಸಿದರು.

ಈ ವರ್ಷದ ಆರಂಭದಲ್ಲಿ ಅಬ್ರಹಾಮ್ ಬಂಡೆಗಲ್ಲೊಂದರ ಒಳಗಡೆ ಒಂದು ವಾರ ಕಳೆದಿದ್ದರು. ಅದಕ್ಕೂ ಮುಂಚೆ 2014ರಲ್ಲಿ, ಕರಡಿಯ ಶಿಲ್ಪದ ಒಳಗಿನ ಟೊಳ್ಳು ಪ್ರದೇಶದಲ್ಲಿ ಎರಡು ವಾರಗಳ ಕಾಲ ವಾಸಿಸಿದ್ದರು.

ಕಾವು ಕೊಡುವುದಕ್ಕಾಗಿ ಅವರು ಏನು ಮಾಡಿದರು?

ಶಾಖ ಹೊರಹೋಗಲು ಬಿಡದ ಹೊದಿಕೆಯೊಂದರಿಂದ ಆವರಿಸಲ್ಪಟ್ಟ ಕುರ್ಚಿಯನ್ನು ಮೊಟ್ಟೆಗಳಿರುವ ಪಾತ್ರೆಯೊಂದರ ಮೇಲೆ ಇಡಲಾಗಿತ್ತು. ಕುರ್ಚಿಯ ಮೇಲೆ ಅಬ್ರಹಾಮ್ ಕುಳಿತುಕೊಳ್ಳುತ್ತಿದ್ದರು. ಅವರು ಒಂದು ದಿನದಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಅವಧಿಗೆ ಕುರ್ಚಿ ಬಿಡುವಂತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News