ಕಾಶ್ಮೀರಿಗಳೊಂದಿಗೆ ಅನುಚಿತ ವರ್ತನೆ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2017-04-21 12:59 GMT

ಹೊಸದಿಲ್ಲಿ,ಎ.21: ಕಾಶ್ಮೀರಿಗಳಿಗೆ ಹಿಂಸೆ ಮತ್ತು ಬೆದರಿಕೆಗಳ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ಒದಗಿಸುವಂತೆ ಕೇಂದ್ರ ಸರಕಾರವು ಶುಕ್ರವಾರ ಎಲ್ಲ ರಾಜ್ಯಗಳಿಗೆ ನಿರ್ದೇಶ ನೀಡಿದೆ.

 ಉತ್ತರ ಪ್ರದೇಶವನ್ನು ತೊರೆಯುವಂತೆ ‘ಕಲ್ಲು ತೂರಾಟಗಾರ ಕಾಶ್ಮೀರಿ ’ಗಳಿಗೆ ಎಚ್ಚರಿಕೆಯನ್ನು ನೀಡಿರುವ ಹೋರ್ಡಿಂಗ್‌ಗಳು ಗುರುವಾರ ಮೀರತ್‌ನಲ್ಲಿ ಪ್ರತ್ಯಕ್ಷವಾಗಿವೆ. ಬುಧವಾರ ರಾಜಸ್ಥಾನದಲ್ಲಿ ಖಾಸಗಿ ವಿವಿಯ ಕಾಶ್ಮೀರಿ ವಿದ್ಯಾರ್ಥಿಗಳ ಗುಂಪೊಂದನ್ನು ಸ್ಥಳೀಯರು ಭಯೋತ್ಪಾದಕರೆಂದು ನಿಂದಿಸಿ ಥಳಿಸಿದ್ದಾರೆ.

ಮೀರತ್‌ನಲ್ಲಿ ಹೋರ್ಡಿಂಗ್‌ಗಳನ್ನು ತೆರವುಗೊಳಿಸಿರುವ ಪೊಲೀಸರು ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸಿದ ಆರೋಪದಲ್ಲಿ ಉತ್ತರ ಪ್ರದೇಶ ನವ ನಿರ್ಮಾಣ ಸೇನಾದ ನಾಯಕ ಜಾನಿ ಎಂಬಾತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕಾಶ್ಮೀರದ ಜನರು ಭಾರತದ ಸಮಾನ ಪ್ರಜೆಗಳು ಎಂದು ಇಲ್ಲಿ ಒತ್ತಿ ಹೇಳಿದ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು, ಕಾಶ್ಮೀರಿಗಳೊಂದಿಗೆ ದುರ್ನಡತೆ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದರು.

ರಾಜಸ್ಥಾನದ ಮೇವಾಡ ವಿವಿಯ ವಿದ್ಯಾರ್ಥಿಗಳ ಗುಂಪೊಂದನ್ನು ಭಯೋತ್ಪಾದಕರೆಂದು ಕರೆದ ಸ್ಥಳೀಯರು ಅವರನ್ನು ಥಳಿಸಿದ್ದಾರೆ. ಕಾಶ್ಮೀರದಲ್ಲಿ ಯೋಧರು ಕಲ್ಲು ತೂರಾಟಗಾರರ ಗುರಿಯಾಗಿರುವುದಕ್ಕೆ ಆಕ್ರೋಶಗೊಂಡು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ನಡೆದ ಮೂರು ದಾಳಿಗಳಲ್ಲಿ ನಮ್ಮ ಪೈಕಿ ಆರು ವಿದ್ಯಾರ್ಥಿಗಳನ್ನು ವಿನಾಕಾರಣ ಥಳಿಸಲಾಗಿದೆ. ಇವು ಸಂಯೋಜಿತ ದಾಳಿಗಳಾಗಿರುವಂತೆ ಕಂಡು ಬರುತ್ತಿದೆ ಎಂದು ಫಾರ್ಮಸಿ ವಿದ್ಯಾರ್ಥಿ ಬಹಾರ್ ಅಹ್ಮದ್ ಗಿರಿ ಹೇಳಿದರು.

ಹಲ್ಲೆಗಳಿಂದ ಯಾರಿಗೂ ಗಂಭೀರ ಗಾಯಗಳಾಗಿಲ್ಲವಾದರೂ,ತಮ್ಮನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವ ವಿವಿ ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ವಿದ್ಯಾರ್ಥಿಗಳು ಆರೋಪಿಗಳ ಬಂಧನಕ್ಕಾಗಿ ಒತ್ತಾಯಿಸಿದ್ದಾರೆ.

ಹಲ್ಲೆಕೋರರು ತಮಗೆ ಕಾಶ್ಮೀರಕ್ಕೆ ಮರಳುವಂತೆ ಬೆದರಿಕೆಯೊಡ್ಡಿದ್ದಾರೆ ಎಂದೂ ಗಿರಿ ತಿಳಿಸಿದರು.

ಈ ಘಟನೆಗಳಿಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News