×
Ad

ತ್ರಿವಳಿ ತಲಾಕ್ ವಿರುದ್ಧ ಮಾತನಾಡಿದ ಮುಸ್ಲಿಂ ಮಹಿಳೆಯಿಂದ ಯೂ ಟರ್ನ್

Update: 2017-04-22 21:55 IST

ಹೊಸದಿಲ್ಲಿ,ಎ.22: ಇತ್ತೀಚಿಗೆ ತ್ರಿವಳಿ ತಲಾಖ್ ಪದ್ಧತಿಯನ್ನು ಖಂಡಿಸಿದ್ದ ತನ್ನ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಉತ್ತರಾಖಂಡದ ಮುಸ್ಲಿಂ ಮಹಿಳೆ ತನ್ನ ಹೇಳಿಕೆಗಳನ್ನು ಹಿಂದೆಗೆದುಕೊಂಡಿದ್ದು, ಆ ಹೇಳಿಕೆಗಳನ್ನು ನೀಡುವಂತೆ ತನ್ನನ್ನು ಬಲವಂತಗೊಳಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾಳೆ.

ಮಹಿಳೆ ಈ ಮೊದಲು ತ್ರಿವಳಿ ತಲಾಖ್ ಸಂತ್ರಸ್ತರಿಗಾಗಿ ಬದಲಾವಣೆಗಳನ್ನು ತರಲು ಪ್ರಯತ್ನಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಪ್ರಶಂಸಿಸಿದ್ದಳು.

ತನ್ನ ಸೋದರಿಗೆ ಆಕೆಯ ಗಂಡ ಕೇವಲ ಮೂರು ಬಾರಿ ತಲಾಖ್ ಉಚ್ಚರಿಸಿ ವಿಚ್ಛೇದನ ನೀಡಿದ್ದರಿಂದ ಈ ಮಹಿಳೆ ಕಳವಳಗೊಂಡಿದ್ದಳು. ಆ ವ್ಯಕ್ತಿ ಎ.16ರಂದು ಬೇರೆ ಮಹಿಳೆಯನ್ನು ಮದುವೆಯಾಗಿದ್ದಾನೆ.ಈ ಬಗ್ಗೆ ಲಿಖಿತ ದೂರು ಸಲ್ಲಿಸಲಾಗಿತ್ತು.

‘‘ತ್ರಿವಳಿ ತಲಾಖ್‌ನಿಂದಾಗಿ ನಮ್ಮ ಮಹಿಳೆಯರ ಬಾಳು ಹಾಳಾಗುತ್ತಿದೆ. ಈ ರೀತಿಯಾಗಿ ವಿಚ್ಛೇದನ ನೀಡುವ ಪುರುಷರನ್ನು ಗಲ್ಲಿಗೇರಿಸಬೇಕು ಅಥವಾ ಜೀವಾವಧಿ ಜೈಲುಶಿಕ್ಷೆ ನಿಡಬೇಕು. ತ್ರಿವಳಿ ತಲಾಖ್ ಪದ್ಧತಿ ಮುಂದುವರಿದರೆ ನಾವು ಮತಾಂತರಗೊಂಡು ಹಿಂದು ಪುರುಷರನ್ನು ಮದುವೆಯಾಗಬೇಕಾಗುತ್ತದೆ. ನಮಗೆ ವಯಸ್ಸಾದಾಗ ನಮ್ಮ ಗಂಡಂದಿರು ನಮ್ಮನ್ನು ತೊರೆಯುವುದರಿಂದ ನಮಗೆ ಯಾವುದೇ ದಿಕ್ಕು ಇರುವುದಿಲ್ಲ. ಹೀಗಾಗಿ ನಾವು ಆ ಕೆಲಸವನ್ನು ಮಾಡಬೇಕಾಗುತ್ತದೆ. ಮೋದಿಯವರು ಮಹಿಳೆಯರ ಕಲ್ಯಾಣಕ್ಕಾಗಿ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ ’’ಎಂದು ಈ ಮಹಿಳೆ ಹೇಳಿದ್ದಳು.

ಆದರೆ ಇಂತಹ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಕ್ಷಮೆ ಯಾಚಿಸಿರುವ ಮಹಿಳೆ, ‘‘ನಾನು ಮುಸ್ಲಿಂ ಆಗಿದ್ದೇನೆ ಮತ್ತು ಇಂತಹ ಹೇಳಿಕೆಗಳನ್ನು ನೀಡಿರುವದಕ್ಕೆ ನನಗೆ ನಾಚಿಕೆಯಾಗುತ್ತಿದೆ ’’ಎಂದು ಹೇಳಿದ್ದಾಳೆ.

‘‘ನಾನು ಆತಂಕದಲ್ಲಿದ್ದೆ ಮತ್ತು ನನ್ನಲ್ಲಿ ಸಿಟ್ಟು ತುಂಬಿತ್ತು. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡಿದ್ದೆ.ಅಲ್ಲದೆ ಇಂತಹ ಹೇಳಿಕೆಗಳನ್ನು ನೀಡುವಂತೆ ನನ್ನ ಮೇಲೆ ಒತ್ತಡವೂ ಇತ್ತು ’’ಎಂದು ಸ್ಪಷ್ಟಪಡಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News