×
Ad

ಜಮ್ಮು: ಅಲೆಮಾರಿಗಳ ಮೇಲೆ ವಿಎಚ್‌ಪಿ ದಾಳಿ; ಐವರಿಗೆ ಗಾಯ

Update: 2017-04-23 09:07 IST

ಜಮ್ಮು, ಎ.23: ರಿಯಾಸಿ ಬಯಲು ಪ್ರದೇಶದಿಂದ ತಮ್ಮ ದನಗಳ ಹಿಂಡನ್ನು ಕಿಷ್ಟ್‌ವಾರ್ ಜಿಲ್ಲೆಯ ಎತ್ತರದ ಹುಲ್ಲುಗಾವಲಿಗೆ ಮೇಯಿಸಲು ಒಯ್ಯುತ್ತಿದ್ದ ಅಲೆಮಾರಿ ಜನಾಂಗದ ಕುಟುಂಬದ ಮೇಲೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಐದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಎಂಟು ವರ್ಷದ ಬಾಲಕಿ ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ.

ಸಂತ್ರಸ್ತರನ್ನು ನಝಕರ್ ಅಲಿ (45), ಪತ್ನಿ ನಸೀಮಾ (40), ಮಾವ ಸಬರ್ ಅಲಿ (60), ಸಂಬಂಧಿಕರಾದ ಆಬಿದಾ ಬೀಬಿ (22) ಹಾಗೂ ಸೈನಾ (8) ಎಂದು ಗುರುತಿಸಲಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಕೆಲ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ರಿಯಾಸಿ ಎಸ್ಪಿ ತಾಹಿರ್ ಭಟ್ ಹೇಳಿದ್ದಾರೆ. 

ರಣಬೀರ್ ದಂಡಸಂಹಿತೆಯ ಸೆಕ್ಷನ್ 188ರ ಅನ್ವಯ ಆರೋಪಿಗಳ ವಿರುದ್ಧ ಹಾಗೂ ಪ್ರಾಣಿಹಿಂಸೆ ತಡೆ ಕಾಯ್ದೆಯ ಸೆಕ್ಷನ್ 3ರ ಅನ್ವಯ ನಾಲ್ವರು ಗಾಯಾಳುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಪ್ರಾಣಿಗಳನ್ನು ಸಾಗಿಸಲು ಬೇಕಾದ ಜಿಲ್ಲಾಧಿಕಾರಿಯ ಅನುಮತಿ ಪತ್ರ ಇದ್ದಿರಲಿಲ್ಲ ಎನ್ನಲಾಗಿದೆ.

ಆದರೆ ಜಮ್ಮು ಮತ್ತು ಕಾಶ್ಮೀರದ ಅಲೆಮಾರಿ ಜನಾಂಗವಾದ ಬೇಕರ್‌ವಾಲ್‌ಗಳಿಗೆ ಇಂಥ ಅನುಮತಿ ಪತ್ರದ ಅಗತ್ಯವಿಲ್ಲ ಎಂದು ಹೆಚ್ಚುವರಿ ಡಿಸಿ ಬಾಬು ರಾಂ ಸ್ಪಷ್ಟಪಡಿಸಿದ್ದಾರೆ. ಕೇವಲ ವಾಹನಗಳಲ್ಲಿ ಅವುಗಳನ್ನು ಸಾಗಿಸಲು ಮಾತ್ರ ಅನುಮತಿ ಅಗತ್ಯ ಎಂದು ಹೇಳಿದ್ದಾರೆ. ಗುರುವಾರ ಸಂಜೆ ವೇಳೆಗೆ 16 ಜಾನುವಾರುಗಳೊಂದಿಗೆ ಮೂರು ಅಲೆಮಾರಿ ಕುಟುಂಬಗಳು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News